

Hyderabad: ಸರ್ಕಾರಿ ಹುದ್ದೆಗೇರಿ ಅಧಿಕಾರಿಗಳಾದ ಬಳಿಕ ಪೋಷಕರನ್ನು ನಿರ್ಲಕ್ಷಿಸುವ ಅಂತಹ ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಮಸೂದೆಯನ್ನು ತರಲು ರೇವಂತ್ ರೆಡ್ಡಿ(Revanth Reddy) ನೇತೃತ್ವದ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಭಾನುವಾರ(ಅ. 19) ವರದಿಯಾಗಿದೆ.
ಶನಿವಾರ ಹೈದರಾಬಾದ್ನ ಶಿಲ್ಪಕಲಾ ವೇದಿಕೆಯಲ್ಲಿ ಹೊಸದಾಗಿ ಆಯ್ಕೆಯಾದ 783 ಗ್ರೂಪ್-II ಅಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರ ವೇತನದಲ್ಲಿ ಶೇ.10–15 ರಷ್ಟು ಕಡಿತಗೊಳಿಸಲು ರಾಜ್ಯ ಸರ್ಕಾರ ಕಾನೂನು ತರಲಿದೆ. ಕಡಿತಗೊಳಿಸಿದ ಮೊತ್ತವನ್ನು ನೇರವಾಗಿ ಪೋಷಕರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ನಿಮ್ಮ ಹೆತ್ತವರ ಕಠಿಣ ಪರಿಶ್ರಮ ಮತ್ತು ತ್ಯಾಗಗಳಿಂದಾಗಿ ನೀವು ಅಧಿಕಾರಿಗಳಾಗಿದ್ದೀರಿ. ನಿಮ್ಮ ಹಿನ್ನೆಲೆ ಅಥವಾ ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ. ಹೆತ್ತವರನ್ನು ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಪ್ರಸ್ತಾವಿತ ಕಾನೂನಿನ ಕರಡು ಟಿಪ್ಪಣಿಯನ್ನು ತಯಾರಿಸಲು ಹೊಸದಾಗಿ ನೇಮಕಗೊಂಡ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ರೇವಂತ್ ಮುಖ್ಯ ಕಾರ್ಯದರ್ಶಿ ಕೆ ರಾಮಕೃಷ್ಣ ರಾವ್ ಅವರಿಗೆ ಇದೇ ವೇಳೆ ನಿರ್ದೇಶನ ನೀಡಿದ್ದಾರೆ.
ಹಿಂದಿನ ಬಿಆರ್ಎಸ್ ಸರ್ಕಾರವನ್ನು ಟೀಕಿಸಿದ ರೇವಂತ್, ನಿರುದ್ಯೋಗವನ್ನು ಪರಿಹರಿಸುವಲ್ಲಿ ಅದು ವಿಫಲವಾಗಿದೆ. ಪರೋಕ್ಷವಾಗಿ ಮಾಜಿ ಸಿಎಂ ಕೆಸಿಆರ್ ಅವರನ್ನು ಉಲ್ಲೇಖಿಸಿ, ಅವರು ಅದಾನಿ ಮತ್ತು ಅಂಬಾನಿ ಜೊತೆ ಸಂಪತ್ತು ಸಂಗ್ರಹಿಸುವಲ್ಲಿ ಸ್ಪರ್ಧಿಸಿದರು. 10 ವರ್ಷಗಳ ಅಧಿಕಾರದಲ್ಲಿದ್ದಾಗ, ಕೆಸಿಆರ್ ತಮ್ಮ ಅಳಿಯನನ್ನು ಅಂಬಾನಿ ಮತ್ತು ಮಗಳನ್ನು ಬಿರ್ಲಾ ಮಾಡುವ ಕನಸು ಕಂಡಿದ್ದರು ಎಂದು ಕಿಡಿಕಾರಿದ್ದಾರೆ.
ಕೆಸಿಆರ್, ನಿರುದ್ಯೋಗಿ ಯುವಕರನ್ನು ನಿರ್ಲಕ್ಷಿಸಿ ರಾಜಕೀಯ ಅವಕಾಶಗಳನ್ನು ತಮ್ಮ ಕುಟುಂಬಕ್ಕೆ ಸೀಮಿತಗೊಳಿಸಿದರು. ಅವರ ಸರ್ಕಾರವು ಒಂದೇ ಒಂದು ಗ್ರೂಪ್-1 ಹುದ್ದೆಯನ್ನು ಸಹ ಭರ್ತಿ ಮಾಡಲಿಲ್ಲ ಎಂದು ಹೇಳಿದರು. (ಏಜೆನ್ಸೀಸ್)