ತೆಲಂಗಾಣ ಚುನಾವಣೆಗೆ ಬಿಎಸ್‌ವೈ ಸ್ಟಾರ್ ಪ್ರಚಾರಕ

yadiyurappa
Published on

ಬೆಂಗಳೂರು: ತೆಲಂಗಾಣ ಸಹಿತ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಬಿಜೆಪಿ ಹೆಚ್ಚಿನ ಮಹತ್ವ ನೀಡಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಬೂಸ್ಟ್ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ವ್ಯೆಹಾತ್ಮಕ ನಡೆ ಅನುಸರಿಸುತ್ತಿದೆ.

ನೆರೆಯ ತೆಲಂಗಾಣ ಚುನಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಐದು ಜನ ಸಚಿವರಿದ್ದರೂ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿಎಸ್‌ವೈಗೆ ಮಾತ್ರ ಮಣೆ ಹಾಕಲಾಗಿದೆ.

ರಾಜ್ಯದ ಕೇಂದ್ರ ಸಚಿವರಿಗೆ ಬೇರೆ ನಾಲ್ಕು ರಾಜ್ಯಗಳ ಚುನಾವಣೆ ಜವಾಬ್ದಾರಿ ಒಪ್ಪಿಸಿರುವ ಕಾರಣ ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಪರಿಗಣಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೋದಿ, ಶಾ ಸೇರಿದ 40 ಜನರ ಪಟ್ಟಿ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಎಸ್‌ವೈ ಒಳಗೊಂಡ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ.

ತೆಲಂಗಾಣ ಚುನಾವಣೆಗೆ ನ.3ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಅದಾಗಲೇ ಜಿದ್ದಾ ಜಿದ್ದಿಗೆ ಇಳಿದಿರುವ ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ.

ತೆಲಂಗಾಣದಲ್ಲೂ ನೆಲೆಯೂರಲು ಬಯಸಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಲು ಪ್ರಯತ್ನಿಸಿದೆ.

ಅಖಾಡ ಸಿದ್ಧವಾದ ನಂತರ ತುರುಸು

ನಾಮಪತ್ರ ವಾಪಸ್ ಪಡೆಯುವುದಕ್ಕೆ ನ.15 ಕೊನೇ ದಿನವಾಗಿದೆ. ಈ ಗಡುವು ಮುಗಿಯುತ್ತಿದ್ದಂತೆ ಸ್ಪರ್ಧಾ ಅಖಾಡ ಸಿದ್ಧವಾಗಲಿದೆ. ನ.30ಕ್ಕೆ ಮತದಾನ ನಡೆಯಲಿದ್ದು, ಅದಕ್ಕೂ ಎರಡು ದಿನ ಮುನ್ನಾ ದಿನದವರೆಗೆ ಬಹಿರಂಗ ಪ್ರಚಾರ, ಸಭೆ, ರ‌್ಯಾಲಿಗಳಿಗೆ ಅವಕಾಶವಿದೆ.

ನಿರಂತರ 13 ದಿನಗಳ ಕಾಲ ಪ್ರಚಾರ ತುರುಸಿನಿಂದ ಸಾಗಲಿದೆ. ಕರ್ನಾಟಕದ 40ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದ ಪ್ರಭಾರಿಗಳಾಗಿ ನೇಮಕವಾಗಲಿದ್ದಾರೆ. ರಾಷ್ಟ್ರೀಯ ನಾಯಕರು ಗೊತ್ತುಪಡಿಸುವ ಪ್ರಚಾರ ಸಭೆಗಳಲ್ಲಿ ಬಿಎಸ್‌ವೈ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.

ತೆಲಂಗಾಣ ರಾಜ್ಯ ಉದಯವಾದ ನಂತರ ನಡೆಯುತ್ತಿರುವ ಚುನಾವಣೆಯಿದಾಗಿದೆ. ಮೊದಲ ಎರಡು ಅವಧಿಯಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ (ಹಿಂದಿನ ಟಿಆರ್‌ಎಸ್) ಗೆದ್ದು ಬೀಗಿದ್ದು, ಹ್ಯಾಟ್ರಿಕ್ ಗೆಲುವಿಗೆ ಹಂಬಲಿಸುತ್ತಿದೆ.

ಆಡಳಿತ ವಿರೋಧಿ ಅಲೆ ನೆರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮದೇ ರಣತಂತ್ರ ರೂಪಿಸಿ, ಬಿಆರ್‌ಎಸ್‌ಗೆ ತೊಡೆ ತಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net