ಸೇತುವೆ ಕೆಳಗೆ ಕಾರು ಬಿದ್ದು ವ್ಯಕ್ತಿ ಸಾವು: ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸ್​ ಪೇದೆಯು ಸೇತುವೆ ಕೆಳಗೆ ಬಿದ್ದು ಮೃತ

Telangana
Published on

ಹೈದರಾಬಾದ್​: ಕಾರೊಂದು ತೆಲಂಗಾಣದ ಕರೀಮ್​ ನಗರದ ಮನೈರ್​ ಸೇತುವೆ ಕೆಳಗಿನ ಹರಿಯುವ ನೀರಿಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದ್ದು, ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಷಾದಕರ ಸಂಗತಿಯೇನೆಂದರೆ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸ್​ ಪೇದೆಯೊಬ್ಬ ರಕ್ಷಣಾ ಕಾರ್ಯವನ್ನು ನೋಡುತ್ತಲೇ ಕಾಲು ಜಾರಿ ಸೇತುವೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಪೇದೆಯನ್ನು ಚಂದ್ರಶೇಖರ್​ ಎಂದು ಗುರುತಿಸಲಾಗಿದೆ. ಸೇತುವೆ ಕೆಳಗಡೆಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಕರೀಮ್​ ನಗರ ಸಹಾಯಕ ಆಯುಕ್ತ ಪಗದಲ ಅಶೋಕ್​, ಭಾನುವಾರ ಬೆಳಗ್ಗೆ 9:30 ಸುಮಾರಿಗೆ ಅಪಘಾತ ಸಂಭವಿಸಿತು. ಕಾರಿನಲ್ಲಿದ್ದ ದಂಪತಿಯನ್ನು ಶ್ರೀನಿವಾಸ ಮತ್ತು ಸ್ವರೂಪ ಎಂದು ಗುರುತಿಸಲಾಗಿದೆ. ಇವರು ಸಿದ್ದಿಪೇಟ್​ ಜಿಲ್ಲೆಯ ಗಜ್ವೆಲ್​ನಲ್ಲಿರುವ ಕೊಮುರವೆಳ್ಳಿ ಮಲ್ಲಣ್ಣ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸೇತುವೆ ಕೆಳಗೆ ಉರುಳಿದೆ. ಸ್ಥಳದಲ್ಲೇ ಶ್ರೀನಿವಾಸ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಸ್ವರೂಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದ ಪೇದೆ ಚಂದ್ರಶೇಖರ್​ ಕೂಡ ಕಾಲು ಜಾರಿ ಸೇತುವೆ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ದುರಾದೃಷ್ಟವಶಾತ್​ ಬದುಕುಳಿಯಲಿಲ್ಲ ಎಂದು ಅಶೋಕ್​ ಹೇಳಿದ್ದಾರೆ.

ಘಟನಾ ಸಂಬಂಧ ಲಾರಿ ಚಾಲಕನನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net