

ಕೆ.ಆರ್.ಪುರ: ಹೆತ್ತ ತಾಯಿಯನ್ನೇ ಕೊಂದು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಹಿಳಾ ಟೆಕ್ಕಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೃತ್ಯಕ್ಕೆ ಪ್ರಿಯಕರ ಸಾಥ್ ಕೊಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಫೆ.2ರ ಬೆಳಗಿನ ಜಾವ ಅಕ್ಷಯನಗರದಲ್ಲಿ ನಿರ್ಮಲಾ (54)ರನ್ನು ಕೊಲೆ ಮಾಡಿದ್ದ ಮಗಳು ಅಮೃತಾ, ತನ್ನ ಸಹೋದರ ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಳು. ಈ ಪ್ರಕರಣದ ತನಿಖೆ ಕೈಗೊಂಡ ಕೆ.ಆರ್. ಪುರ ಪೊಲೀಸರು, ಮನೆಯ ಅಕ್ಕಪಕ್ಕದ ಸಿಸಿ ಕ್ಯಾಮರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಪ್ರಿಯಕರನ ಜತೆ ಬೈಕ್ನಲ್ಲಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಿಯಕರ ಸುಬ್ಬಯ್ಯನ ಪಾಳ್ಯದಲ್ಲಿ ಪಾಲಕರ ಜತೆ ವಾಸಿಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯ ವಾಗಿದ್ದು, ಆತ ಕೂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಅಮೃತಾ ಪ್ರಿಯಕರನ ಮೊಬೈಲ್ಗೆ ಕರೆ ಮಾಡಿದ್ದಾಳೆ. ಆತ ಬಟ್ಟೆ, ಬ್ಯಾಗ್ ಜತೆ ಬೈಕ್ನಲ್ಲಿ ಮನೆ ಬಳಿಗೆ ಬಂದಿದ್ದಾನೆ. ಅದೇ ವೇಳೆ ಅಮೃತಾ, ಬ್ಯಾಗ್ ತೆಗೆದುಕೊಂಡು ಬೈಕ್ ಏರಿ ಪ್ರಿಯಕರನ ಜತೆ ತೆರಳಿದ್ದಾಳೆ. ಅಲ್ಲಿಂದ ಇಬ್ಬರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಬೆಳಗಿನ ಜಾವ 5.30ಕ್ಕೆ ವಿಮಾನದಲ್ಲಿ ಅಂಡಮಾನ್ಗೆ ತೆರಳಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಏರ್ಪೋರ್ಟ್ನಲ್ಲಿ ಬೈಕ್ ಪತ್ತೆಯಾಗಿದೆ. ಆರೋಪಿಗಳ ಜಾಡು ಹಿಡಿದ ವಿಶೇಷ ಪೊಲೀಸ್ ತಂಡಗಳು ಅಂಡಮಾನ್ ಮತ್ತು ಹೈದರಾಬಾದ್ನಲ್ಲಿ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
ಸಹೋದರಿ ಹಲ್ಲೆಯಿಂದ ಹರೀಶ್ ಸಹ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಳರಿಂದ ಎಂಟು ಬಾರಿ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ್ದಾಳೆ. ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಹರೀಶ್ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಲವ್ ಕಾರಣ..
ಮನೆಯ ಹಾಲ್ನಲ್ಲಿ ತಾಯಿ, ಮಗಳು ಮಲಗುತ್ತಿದ್ದರು. ಸಹೋದರ ಹರೀಶ್ ರೂಂನಲ್ಲಿ ಮಲಗುತ್ತಿದ್ದ. ಫೆ.2ರ ಬೆಳಗಿನ ಜಾವ ಕೃತ್ಯ ನಡೆದಾಗ ರೂಂನಿಂದ ಹೊರಬಂದು ನೋಡಿ ಅಮ್ಮ ಎಲ್ಲಿ ಎಂದು ಸಹೋದರಿಯನ್ನು ಹರೀಶ್ ಪ್ರಶ್ನಿಸಿದ್ದಾನೆ. ಅದಕ್ಕೆ ಅಮೃತಾ, ಇದೇ ಚಾಕುವಿನಿಂದ ಕೊಲೆ ಮಾಡಿದ್ದೇನೆ ನೋಡು ಎಂದಿದ್ದಾಳೆ. ನಾನು 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದೇನೆ. ಬೆಳಗ್ಗೆ ಸಾಲ ಕೊಟ್ಟವರು ಮನೆ ಬಳಿಗೆ ಬಂದು ಗಲಾಟೆ ಮಾಡುತ್ತಾರೆ. ನನ್ನ ಬಂಡವಾಳ ಎಲ್ಲರಿಗೂ ಗೊತ್ತಾಗಿ ಮರ್ಯಾದೆ ಹೋಗುತ್ತದೆ. ಅದಕ್ಕೆ ಅಮ್ಮನ ಕೊಲೆ ಮಾಡಿದೆ ಎಂದು ಸಹೋದರನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವಿಚಾರವನ್ನು ಹರೀಶ್ ವಿಚಾರಣೆ ವೇಳೆ ಹೇಳಿದ್ದಾರೆ. ಸಿಸಿ ಕ್ಯಾಮರಾ ಮತ್ತು ಮೊಬೈಲ್ ಕರೆಗಳನ್ನು ಪರಿಶೀಲನೆ ನಡೆಸಿದಾಗ ಪ್ರಿಯಕರನ ಜತೆ ಹೋಗಲು ಸುಳ್ಳು ಹೇಳಿರುವ ಸಾಧ್ಯತೆ ಹೆಚ್ಚಿದೆ. ಆರೋಪಿಗಳ ಬಂಧನದ ಬಳಿಕ ನಿಜಾಂಶ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲೇ ಸಂಚು ರೂಪಿಸಿ ಕೃತ್ಯ
ಟೆಕ್ಕಿ ಅಮೃತಾ, ತನ್ನ ಪ್ರಿಯಕರ ಜತೆ ಸೇರಿ ಸಂಚು ರೂಪಿಸಿ ತಾಯಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಿಯಕರನನ್ನು ಮದುವೆಯಾಗುವ ವಿಚಾರವನ್ನು ಅಮೃತಾ, ಮನೆಯಲ್ಲಿ ಪ್ರಸ್ತಾಪ ಮಾಡಿದಾಗ ವಿರೋಧ ವ್ಯಕ್ತವಾಗಿತ್ತು. ಇದೇ ಸಿಟ್ಟಿಗೆ ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿದ್ದಾಳೆ. ಅಮೃತಾಗೆ ಇತ್ತೀಚೆಗೆ ಹೈದರಾಬಾದ್ನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿಗೆ ಹೋಗುವುದಾಗಿ ಹೇಳಿದ್ದಳು.