

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರನ್ನು ಭಾರತೀಯ ತಾಂತ್ರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಪಶ್ಚಿಮಬಂಗಾಳದ ಶಿಬಪುರದಲ್ಲಿ ಮಂಡಳಿ ಕೇಂದ್ರ ಕಚೇರಿಯಿದೆ. ತಾಂತ್ರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ, ಸಂಶೋಧನೆ ನೆಲೆಯಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ.
ಕೊನೆಗೂ ಮಹತ್ವದ ಸ್ಥಾನ
ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಗಿತ್ತು. ವಿಧಾನ ಪರಿಷತ್‌ಗೆ ನೇಮಕ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರ ಹೆಸರು ಚರ್ಚೆಗೆ ಬಂದು ಮರೆಗೆ ಸರಿದಿತ್ತು. ಆದ್ಯತೆ ವಿಷಯದಲ್ಲಿ ತೇಜಸ್ವಿಯವರನ್ನು ಕಡೆಗಣಿಸಲಾಗಿದೆ ಎಂಬ ಅಪಸ್ವರ ಕೊನೆಗಾಣಿಸಲು ಪಕ್ಷದ ದೆಹಲಿ ನಾಯಕರು ಕೊನೆಗೂ ಮಹತ್ವದ ಹುದ್ದೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ದಕ್ಷಿಣಲೋಕಸಭೆ ಕ್ಷೇತ್ರದ ಟಿಕೆಟ್ ತೇಜಸ್ವಿನಿಯವರಿಗೆ ನೀಡಲಾಗುತ್ತದೆ ಎಂಬ ಲೆಕ್ಕಾಚಾರವನ್ನು ಪಕ್ಷದ ವರಿಷ್ಠರು ತಲೆಕೆಳಗು ಮಾಡಿ, ಹೊಸಮುಖ ತೇಜಸ್ವಿಸೂರ್ಯಗೆ ಮಣೆ ಹಾಕಿದರು.
ಅನಂತಕುಮಾರ್ ಕಾರಣ ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ತೇಜಸ್ವಿ ಸೂರ್ಯ ಗೆದ್ದರು. ಇದೀಗ ಮತ್ತೊಂದು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ತೇಜಸ್ವಿನಿ ಅವರಿಗೆ ವರಿಷ್ಠರು ಪ್ರಾಮುಖ್ಯ ನೀಡಲಾಗಿದೆ ಎಂದು ಪಕ್ಷದ ಮೂಲಗಳು ವಿಶ್ಲೇಷಿಸುತ್ತಿವೆ.