ಅಮಾಯಕ ಹಿಂದುಗಳ ವಿರುದ್ಧ ದಾವೆ‌ ಕೈಬಿಡದಿದ್ದರೆ ಪ್ರತಿ ಹಳ್ಳಿಗಳಲ್ಲಿ ಹೋರಾಟ: ತೇಜಸ್ವಿ ಸೂರ್ಯ ಎಚ್ಚರಿಕೆ

ವಿಜಯವಾಣಿ - 2024-09-13T123243.162
Published on

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಕಾಲಕ್ಕೆ ಒಂದು ಕೋಮಿನವರ ದುಷ್ಕೃತ್ಯ ಆಘಾತಕಾರಿಯಾಗಿದೆ. ಈ ಪ್ರಕರಣದಲ್ಲಿ ಅಮಾಯಕ ಹಿಂದುಗಳ ವಿರುದ್ಧ ಹೂಡಿರುವ ದಾವೆ ಹಿಂಪಡೆಯದಿದ್ದರೆ ಪ್ರತಿ ಮಂಡಲ, ಹಳ್ಳಿಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಸಂಸದ, ರಾಷ್ಡ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಎಚ್ಚರಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ 'ಮೊಹಬ್ಬತ್ ಕಿ ದುಖಾನ್'​ನಿಂದ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಿದವರ ವಿರುದ್ಧ ಕ್ರಮವಿಲ್ಲ. ಆದರೆ ಈ ಘಟನೆಯಲ್ಲಿ ನೊಂದ, ಶಾಂತಿಯುತವಾಗಿ ಗಣೇಶ ವಿಸರ್ಜನಾ ಮೆರವಣಿಗೆ ಮಾಡಿದ 23 ಅಮಾಯಕ ಹಿಂದುಗಳ ಮೇಲೆ ಮೊಕದ್ದಮೆ ಹೂಡಲಾಗಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತಿದೆಯೋ ಅಥವಾ ಷರಿಯಾ ಮೇಲೆ ಆಡಳಿತ ನಡೆಸುತ್ತಿದೆಯೋ ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ, ಆಕಸ್ಮಿಕ ಎಂದಿರುವುದು ತುಷ್ಟೀಕರಣದ ರಾಜಕೀಯಕ್ಕೆ ನಿದರ್ಶನವೆಂದು ತೇಜಸ್ವಿಸೂರ್ಯ ಕಿಡಿಕಾರಿದರು. ಪೆಟ್ರೋಲ್ ಬಾಂಬ್​ಗಳು, ಮಚ್ಚು, ಮೊಹಬ್ಬತ್ ಕಿ ದುಖಾನ್ ದುಷ್ಕರ್ಮಿಗಳು ಬಳಸಿರುವುದು ಗಮನಿಸಿದರೆ, ಇದೊಂದು ಪೂರ್ವಯೋಜಿತ ಕೃತ್ಯವೆಂಬ ಸಂಶಯ ಉಂಟಾಗುತ್ತದೆ. ಔರಂಗಜೇಬ್, ಟಿಪ್ಪು ಸಂತತಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಒತ್ತಾಯಿಸಿದರು.

ಚೀನಾ ಏಜೆಂಟ್ ರಾಹುಲ್ ಗಾಂಧಿ

ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಭಾರತ ವಿರೋಧಿಗಳ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಚೀನಾ ಏಜೆಂಟರಂತೆ ಮಾತುಗಳು, ವರ್ತನೆಯು ಅಸಹ್ಯಕರ. ಲೋಕಸಭಾ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ದೇಶದೊಳಗೆ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುವುದು, ಜಾತಿ ಗಣತಿ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವುದು. ದೇಶದ ಹೊರಗೆ ಮೀಸಲಾತಿ ರದ್ದು, ಸಮಾನತೆ ಬಗ್ಗೆ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಆಷಾಡಭೂತಿತನದ ಮಾನಸಿಕತೆಯನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದಾರೆ. ಎಸ್​.ಸಿ, ಎಸ್.ಟಿ ಮೀಸಲಿನಿಂದ ದೇಶಕ್ಕೆ ನಷ್ಟವಾಗುತ್ತದೆ ಎಂದು ನೆಹರೂ ಪ್ರತಿಪಾದಿಸಿದ್ದರು. ಒಬಿಸಿಗೆ ಮೀಸಲು ನೀಡುವುದಕ್ಕೆ ರಾಜೀವ್ ಗಾಂಧಿ ವಿರೋಧಿಸಿದ್ದರು. ಅದೇ ಮಾನಸಿಕತೆಯನ್ನು ರಾಹುಲ್ ಗಾಂಧಿ ಹೊರ ಹಾಕಿದ್ದು, ಈ ಮೀಸಲು ವಿರೋಧಿ ಮನಸ್ಥಿತಿಯ ಬಗ್ಗೆ ಎಸ್ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಯುವ ಜನರು ಜಾಗೃತರಾಗಬೇಕಾದ ಅಗತ್ಯವಿದೆ ಎಂದು ತೇಜಸ್ವಿ ಸೂರ್ಯ ಮನವಿ ಮಾಡಿದರು.

ದೋಷಾರೋಪ ಮುಕ್ತರಲ್ಲ

ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಬಂಧಿತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆಯೇ ಹೊರತು ದೋಷಾರೋಪದಿಂದ ಮುಕ್ತ ಮಾಡಿಲ್ಲ. ಹಗರಣದ ಮುಂದಿನ ಹಂತದ ತನಿಖೆಗೆ ಸಹಕರಿಸುತ್ತಾರೆ ಎಂದು ನಿರೀಕ್ಷಿಸಿ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಒಂದು ವೇಳೆ ಸಹಕರಿಸದಿದ್ದರೆ ಕೋರ್ಟ್​​ನಿಂದ ಜಾಮೀನು ರದ್ದಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಭದ್ರಾ ಮೇಲ್ದಂಡೆ ತಪ್ಪು ಮಾಹಿತಿ ಸಲ್ಲದು

ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ ಬಿಡುಗಡೆ ವಿಚಾರವಾಗಿ ಕೇಂದ್ರದ ಜಲಶಕ್ತಿ ಸಚಿವಾಲಯ ಬರೆದ ಪತ್ರದ ಬಗ್ಗೆ ತಪ್ಪು ವ್ಯಾಖ್ಯಾನಿಸಿ, ತಪ್ಪು ಮಾಹಿತಿ ನೀಡುವುದು ಸಲ್ಲದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿಕೆಯನ್ನು ಆಕ್ಷೇಪಿಸಿದರು. ಭದ್ರಾ ಮೇಲ್ದಂಡೆಯ ವಿಸ್ತೃತ ಯೋಜನಾ ವರದಿ ಬಗ್ಗೆ ತಾಂತ್ರಿಕವಾಗಿ ಕಾರ್ಯಸಾಧ್ಯತೆ ಸ್ಪಷ್ಟೀಕರಣವನ್ನು ಜಲಶಕ್ತಿ ಸಚಿವಾಲಯ ಕಾರ್ಯದರ್ಶಿ ಸ್ಪಷ್ಟೀಕರಣ ಕೇಳಿದ್ದು, ರಾಜ್ಯ ಸರ್ಕಾರ ಸೂಕ್ತ ಸ್ಪಷ್ಟೀಕರಣ ನೀಡಬೇಕು. ಮೇಕೆದಾಟು ಯೋಜನೆಗೆ ಮಿತ್ರಪಕ್ಷ ತಮಿಳುನಾಡಿನ ಮುಖ್ಯಮಂತ್ರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯುವುದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net