ರಾಹುಲ್ ಗಾಂಧಿ ಪಂಥಾಹ್ವಾನ ಸ್ವೀಕರಿಸಿದ ತೇಜಸ್ವಿ ಸೂರ್ಯ

Tejasvi Surya
Published on

ಬೆಂಗಳೂರು: ಬಹಿರಂಗ ಚರ್ಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಪಂಥಾಹ್ವಾನವನ್ನು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿಸೂರ್ಯ ಸ್ವೀಕರಿಸಿದ್ದಾರೆ.

ರಾಹುಲ್‌ಗಾಂಧಿ ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿಯೇ ಬಹಿರಂಗ ಚರ್ಚೆಗೆ ವೇದಿಕೆ ಸಜ್ಜುಗೊಳಿಸಿ, ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ ಪ್ರಕಾಶ್ ಅವರನ್ನು ನಿಯೋಜಿಸಿದ್ದಾರೆ.

ರಾಹುಲ್‌ಗಾಂಧಿಗೆ ಈ ಕುರಿತು ಪತ್ರ ಬರೆದಿರುವ ತೇಜಸ್ವಿಸೂರ್ಯ, ಲೋಕಸಭೆ ಚುನಾವಣೆಯ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ಮಧ್ಯೆ ಮುಕ್ತ ಸಂವಾದ ಮತ್ತು ಬಹಿರಂಗ ಚರ್ಚೆಗೆ ಆಸಕ್ತಿ ವ್ಯಕ್ತಪಡಿಸಿರುವುದನ್ನು ಪ್ರಶಂಸಿಸಿದ್ದಾರೆ.

ಯುವ ಮೋರ್ಚಾದಿಂದ ಬಹಿರಂಗ ಚರ್ಚೆಗೆ ನಿಯೋಜಿತ ಅಭಿನವ್ ಪ್ರಕಾಶ್ ಅವರು ಶೋಷಿತ ಸಮುದಾಯಕ್ಕೆ ಸೇರಿದವರು. ಜವಾಹರಲಾಲ್ ನೆಹರು ವಿವಿಯ ಹಳೇ ವಿದ್ಯಾರ್ಥಿ, ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ಅರ್ಥಶಾಸದ ಸಹಾಯಕ ಪ್ರಾಧ್ಯಾಪಕರು.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳ ಬಗ್ಗೆ ಆಳವಾದ ತಿಳಿವಳಿಯುಳ್ಳವರು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಕುಟುಂಬ ದೀರ್ಘಕಾಲದ ಪ್ರತಿನಿಧಿಸುತ್ತಿರುವ, ನೀವು ಪ್ರಸ್ತುತ ಸ್ಪರ್ಧಿತ್ತಿರುವ ರಾಯ್‌ಬರೇಲಿ ಕ್ಷೇತ್ರದವರಾಗಿದ್ದಾರೆ ಎಂದು ತೇಜಸ್ವಿಸೂರ್ಯ ತಿಳಿಸಿದ್ದಾರೆ.

ಸ್ವಾತಂತ್ರ್ಯ ನಂತರ ಭಾರತವನ್ನು ದೀರ್ಘ ಕಾಲ ಆಳಿದ ರಾಜಕೀಯ ರಾಜವಂಶದ ಕುಡಿ ಮತ್ತು ನರೇಂದ್ರ ಮೋದಿಯವರ ಹೊಸ ಭಾರತವನ್ನು ಪ್ರತಿನಿಧಿಸುತ್ತಿರುವ ಸಾಮಾನ್ಯ ಜನರ ನಡುವೆ ಐತಿಹಾಸಿಕ ಚರ್ಚೆಯ ವೇದಿಕೆಯಿದಾಗಲಿದೆ ಎಂಬ ಭರವಸೆ ನೀಡಿದ್ದಾರೆ.

ರಾಯ್‌ಬರೇಲಿಯಲ್ಲೇ ಬಹಿರಂಗ ಚರ್ಚೆಯ ಈ ಆಹ್ವಾನವನ್ನು ರಾಹುಲ್ ಗಾಂಧಿ ಸ್ವೀಕರಿಸಿ, ಸ್ಪಂದಿಸುವ ನಿರೀಕ್ಷೆಯಲ್ಲಿರುವೆ ಎಂದು ತೇಜಸ್ವಿ ಸೂರ್ಯ ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೋದಿಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿ ರಾಹುಲ್ ಗಾಂಧಿ ಪತ್ರ ಬರೆದರೆ, ಪ್ರತಿಯಾಗಿ ಮುಕ್ತ ಸಂವಾದದ ಪಂಥಾಹ್ವಾನವನ್ನು ತೇಜಸ್ವಿ ಸೂರ್ಯ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net