ತಹಸೀಲ್ದಾರ್​, ನಗರಸಭೆ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

21-RNR-06
Published on

ರಾಣೆಬೆನ್ನೂರ: ಇಲ್ಲಿಯ ತಹಸೀಲ್ದಾರ್​ ಹಾಗೂ ನಗರಸಭೆ ಕಚೇರಿಗೆ ಬುಧವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್​ ಕಚೇರಿಗೆ ಭೇಟಿ ನೀಡಿದ ಅವರು, ಆರ್​ಟಿಸಿ ಆಧಾರ ಸೀಡಿಂಗ್​ ಪ್ರಗತಿ, ಹೊಸ ಪಡಿತರ ಚೀಟಿ ವಿತರಣೆ, ಅಭಿಲೇಖಾಲಯ ಮತ್ತು ಕಚೇರಿ ಸ್ವಚ್ಛತೆ ಕುರಿತು ಪರಿಶೀಲಿಸಿದರು. ನಂತರ ಉಪನೋಂದಣಾಧಿಕಾರಿ ಕಚೇರಿ, ಭೂ ದಾಖಲೆ ವಿಭಾಗ, ಖಜಾನೆಗೆ ಭೇಟಿ ನೀಡಿ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸಾರ್ವಜನಿಕರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ವಿಲೆವಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ನಗರಸಭೆಗೆ ಭೇಟಿ ನೀಡಿ ಅವರು, ಖಾತಾ ಬದಲಾವಣೆ ಪ್ರಕ್ರಿಯೆ ಮತ್ತು ಇನ್ನಿತರ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಗರದ ಗಟಾರ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದ ಅವರು, ಗಟಾರ ಸ್ವಚ್ಛತೆಗೆ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​, ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಕಂದಾಯ ನಿರೀಕ್ಷಕರಾದ ಅಶೋಕ ಅರಳೇಶ್ವರ, ವಾಗೀಶ ಮಳಿಮಠ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net