

ಶಿಗ್ಗಾಂವಿ ತಹಸೀಲ್ದಾರರಾಗಿದ್ದ ಚಂದ್ರಶೇಖರ ಗಾಳಿ ಅವರನ್ನು ಫೆ. 3ರಂದು ಹಲವು ಆರೋಪಗಳ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಆದರೆ, ವರ್ಗಾವಣೆ ವಿರುದ್ಧ ಕೆಎಟಿಯಿಂದ ತಡೆಯಾಜ್ಞೆ ತಂದ ಗಾಳಿ, ಗುರುವಾರ ಸಂಜೆ ಮರಳಿ ಅಧಿಕಾರ ಸ್ವೀಕರಿಸಿದ್ದಾರೆ.
ಕಾನೂನು ಪ್ರಕಾರ ಎರಡು ವರ್ಷಗಳವರೆಗೆ ವರ್ಗಾವಣೆ ಮಾಡುವಂತಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಶಿಫಾರಸಿನ ಮೇರೆಗೆ ಸರ್ಕಾರ ನನ್ನನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದೆ. ಉಸ್ತುವಾರಿ ಸಚಿವರು ತಾಲೂಕಿನ ಸಮಸ್ಯೆಗೆ ಸ್ಪಂದಿಸುತ್ತಿರಲಿಲ್ಲ. ಅಭಿವೃದ್ಧಿ ವಿಷಯದ ಕುರಿತು ರ್ಚಚಿಸಲು ಸಮಯವನ್ನೂ ನೀಡುತ್ತಿರಲಿಲ್ಲ ಎಂದು ಬೊಮ್ಮಾಯಿ ವಿರುದ್ಧ ನೇರ ವಾಗ್ದಾಳಿ ಮಾಡಿದ್ದಾರೆ.
ಅತಿವೃಷ್ಟಿ, ನೆರೆ ಪರಿಹಾರ ನೀಡುವಲ್ಲಿ ತಾರತಮ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕೆಲಸಗಳನ್ನು ಮಾತ್ರ ಮಾಡುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಗಾಳಿ ಅವರನ್ನು ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.