

ಬೆಂಗಳೂರು: ಬನ್ಯನ್ ಟ್ರೀ ತನ್ನ 18ನೇ ಆವೃತ್ತಿಯ ತೀನ್ ಪ್ರಹಾರ ಉತ್ಸವದ ಅಂಗವಾಗಿ ಇದೇ ಗುರುವಾರ (ಫೆ.27)ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಇನ್ನು ಕಾರ್ಯಕ್ರಮ ಸಂಜೆ 6ಕ್ಕೆ ನಡೆಯಲಿದ್ದು, ಸಿತಾರ್ ವಾದಕ ಉಸ್ತಾದ್ ಶುಜಾತ್ ಖಾನ್ ಮತ್ತು ಪಂ. ವೆಂಕಟೇಶ್ ಕುಮಾರ್ ಅವರಿಂದ ಕ್ರಮವಾಗಿ ಸಿತಾರ ವಾದನ ಹಾಗೂ ಹಿಂದೂಸ್ತಾನಿ ಗಾಯನ ನಡೆಯಲಿದೆ. ಅಲ್ಲದೆ, ವಿವಿಧ ಕಲಾವಿದರಾದ ಶ್ರುತಿ ವಿಶ್ವಕರ್ಮ (ಗಾಯನ), ಸ್ವರ ಶರ್ಮಾ (ಗಾಯನ), ಸಂದೀಪ್ ಮಿಶ್ರಾ (ಸಾರಂಗಿ), ಹೃಷಿಕೇಶ್ ಮಜುಂದಾರ್ (ಕೊಳಲು), ರೋಹಿತ್ ದೇವು (ತಬಲಾ), ತೇಜಸ್ ಕಾಟೋಟಿ (ಹಾರ್ಮೋನಿಯಂ) ಸಂಗೀತ ಉತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರಿಗೆ www.bookmyshow.com ನಲ್ಲಿ ಟಿಕೆಟ್‌ಗಳು ಲಭ್ಯವಿದೆ ಎಂದ ಆಯೋಜಕರು ತಿಳಿಸಿದ್ದಾರೆ.
ತೀನ್ ಪ್ರಹಾರ ಉತ್ಸವವನ್ನು 2006ರಲ್ಲಿ ಆರಂಭವಾಗಿದ್ದು, ಅಂದಿನಿಂದ ಭಾರತದಾದ್ಯಂತದ ಸಂಗೀತ ಪ್ರೇಮಿಗಳಿಗೆ ಅಪರೂಪದ ಸಂಗೀತ ರಸದೌತಣ ಉಣಬಡಿಸುತ್ತಿದೆ. ದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಕಳೆದ 17 ವರ್ಷಗಳಿಂದ ಅಗಾಧ ಪ್ರತಿಕ್ರಿಯೆಗಳನ್ನು ಪಡೆದಿರುವ ತೀನ್ ಪ್ರಹಾರ ಉತ್ಸವವು ಅತ್ಯಂತ ನಿರೀಕ್ಷಿತ ಭಾರತೀಯ ಶಾಸ್ತ್ರೀಯ ಸಂಗೀತ ಉತ್ಸವಗಳಲ್ಲಿ ಒಂದಾಗಿದೆ.