

ಲಖನೌ: ನಾಲ್ವರು ದುರುಳರು ತನಗೆ ನೀಡುತ್ತಿದ್ದ ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ ಒಡ್ಡಿದ ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳಿಗೆ ಸ್ಯಾನಿಟೈಸರ್ ಕುಡಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಘಠನೆಯೂ ಜುಲೈ 27ರಂದು ನಡೆದಿದ್ದು, ಅಪ್ರಾಪ್ತ ವಯಸ್ಕ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅಸುನೀಗಿದ್ದಾಳೆ. ಪ್ರಕರಣದ ನಾಲ್ವರು ಆರೋಪಿಗಳು ತಲೆಮಾರಿಸಿಕೊಂಡಿದ್ದು, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ತಂಡ ರಚಿಸಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬರೇಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಜುಲೈ 27ರಂದು ಅಪ್ರಾಪ್ತ ವಯಸ್ಕಳು ಶಾಲೆ ಮುಗಿದ ಬಳಿಕ ತನ್ನ ಸಹೋದರನೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಉದೇಶ್ ರಾಥೋಢ್ ಎಂಬಾತ ಬಾಲಕಿಯನ್ಉ ಅಡ್ಡಗಟ್ಟಿದ್ದಾನೆ.
ಬಳಿಕ ಆಕೆಗೆ ನಡುರಸ್ತೆಯಲ್ಲೇ ಆತ ಕಿರುಕುಳ ನೀಡಲು ಶುರು ಮಾಡಿದ್ದು, ಈತನಿಗೆ ಇನ್ನು ಮೂವರು ಸಾಥ್ ನೀಡಿದ್ಧಾರೆ. ಇದನ್ನು ಪ್ರಶ್ನಿಸಿದ ಆಕೆಯ ಸಹೋದರನಿಗೆ ಆರೋಪಿಗಳ ಮನಬಂದಂತೆ ಥಳಿಸಿ ಬಾಲಕಿಗೆ ಸ್ಯಾನಿಟೈಸರ್ ಕುಡಿಸಿ ಪರಾರಿಯಾಗಿದ್ದಾರೆ. ಈ ಕೃತ್ಯವನ್ನು ಆರೋಪಿಗಳು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಸ್ಯಾನಿಟೈಸರ್ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ. ಮೃತ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದ್ದು, ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಬರೇಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ತಿಳಿಸಿದ್ದಾರೆ.