ಟ್ಯೂಷನ್​ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ! ಅಸ್ಸಾಂನಲ್ಲಿ ಪೈಶಾಚಿಕ ಕೃತ್ಯ!!

rapedf
Published on

ದಿಸ್ಪುರ: ಕೋಲ್ಕತ್ತಾ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಮತ್ತಷ್ಟು ಅತ್ಯಾಚಾರ ಘಟನೆಗಳೂ ಬೆಳಕಿಗೆ ಬರುತ್ತಿವೆ. ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿನಿ ಮೇಲೆ ಕಸಗುಡಿಸುವವನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದನ್ನು ಮರೆಯುವ ಮುನ್ನವೇ ಅಸ್ಸಾಂನಲ್ಲಿ ಮತ್ತೊಬ್ಬ ಬಾಲಕಿ ಮೇಲೆ ಪುಂಡರ ಗುಂಪು ಕ್ರೌರ್ಯ ಮೆರೆದಿದೆ.

ಅಸ್ಸಾಂನಲ್ಲಿ ಗುರುವಾರ 14 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಸ್ಸಾಂನ ನಾಗಾಂವ್ ಜಿಲ್ಲೆಯ ಬಾಲಕಿ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ತೆರಳಿದ್ದಳು. ಆಗ ದಾರಿಯಲ್ಲಿ ಮೂವರು ಹುಡುಗರು ಆಕೆಯನ್ನು ಅಡ್ಡಗಟ್ಟಿ ಸಮೀಪದ ಕೆರೆ ಬಳಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಲ್ಲಿಂದ ಓಡಿ ಹೋಗಿದ್ದಾರೆ.

ಬಾಲಕಿ ಕೆರೆಯ ಬಳಿ ವಿವಸ್ತ್ರಳಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ನಂತರ, ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಪ್ರಾಪ್ತೆ ಪೊಲೀಸರಿಗೆ ತಿಳಿಸಿದ ನಂತರ, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗಿದೆ. 12 ಗಂಟೆಯೊಳಗೆ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net