

ಭಾರತೀಯ ಸೈನಿಕರು ಹಾಗೂ ಅವರ ಕುಟುಂಬದವರು ಚೀನಾದ ಮೊಬೈಲ್ಫೋನ್ಗಳನ್ನು ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಭಾರತದ ಗುಪ್ತಚರ ಸಂಸ್ಥೆಗಳು ಉನ್ನತ ರಕ್ಷಣಾ ಅಧಿಕಾರಿಗಳಿಗೆ ಸಲಹೆ ನೀಡಿರುವುದು ಭಾರತ- ಚೀನಾ ಗಡಿ ಬಿಕ್ಕಟ್ಟಿನ ಕಾರಣ ವಾಸ್ತವ ನಿಯಂತ್ರಣ ರೇಖೆಯಗುಂಟ ಇರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಹತ್ವದ ನಡೆಯಾಗಿದೆ. ಚೀನಾ ಮೂಲದ ಮೊಬೈಲ್ಫೋನ್ಗಳಲ್ಲಿ ಶಂಕಿತ ಮಾಲ್ವೇರ್ ಹಾಗೂ ಸ್ಪೈವೇರ್ (ಗೂಢಚರ್ಯ ಆಪ್ಗಳು) ಕಂಡುಬಂದಿವೆ. ಹೀಗಾಗಿ, ಭಾರತಕ್ಕೆ ಪ್ರತಿಕೂಲವಾದ ದೇಶಗಳಿಂದ ಮೊಬೈಲ್ಫೋನ್ಗಳನ್ನು ಖರೀದಿಸುವುದರಿಂದ ಅಥವಾ ಬಳಸುವುದರಿಂದ ದೂರ ಇರಬೇಕು ಎಂದು ಮಿಲಿಟರಿ ಬೇಹುಗಾರಿಕೆ ಸಂಸ್ಥೆಗಳು ಸೈನಿಕರಿಗೆ ಸಲಹೆ ನೀಡಿವೆ. ಈ ಹಿಂದೆಯೂ ಗುಪ್ತಚರ ಸಂಸ್ಥೆಗಳು ಸೇನಾ ಸಿಬ್ಬಂದಿಯ ಫೋನ್ಗಳಿಂದ ಹಲವು ಅನುಮಾನಾಸ್ಪದ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದ್ದವು. ತಮ್ಮ ಸಾಧನಗಳಲ್ಲಿ ಚೀನಾದ ಮೊಬೈಲ್ ಫೋನ್ ಮತ್ತು ಅಪ್ಲಿಕೇಶನ್ಗಳನ್ನು ಬಳಸುವುದನ್ನು ಕೂಡ ರಕ್ಷಣಾ ಪಡೆಗಳು ನಿಲ್ಲಿಸಿವೆ.
ಇದೀಗ ಸೇನಾ ಸಿಬ್ಬಂದಿ ಮಾತ್ರವಲ್ಲದೆ, ಅವರ ಕುಟುಂಬದ ಸದಸ್ಯರು ಕೂಡ ಚೀನಾ ಮೊಬೈಲ್ಫೋನ್ ಬಳಸದಿರುವಂತೆ ಎಚ್ಚರಿಕೆ ನೀಡಿರುವುದು ಚೀನಾ ಮೇಲಣ ಅನುಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. 2020ರ ಮಾರ್ಚ್ನಲ್ಲಿ ಚೀನಾ ಹಾಗೂ ಭಾರತ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಹಿನ್ನೆಲೆಯಲ್ಲಿ ಲಡಾಖ್ನಿಂದ ಅರುಣಾಚಲ ಪ್ರದೇಶದವರೆಗೂ ವಾಸ್ತವ ನಿಯಂತ್ರಣ ರೇಖೆಯ ಗುಂಟ ಸೈನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾದ ತಲೆಬೇನೆ ಒಂದು ತೂಕ ಜಾಸ್ತಿಯೇ ಇದೆ ಎಂದು ಪರಿಗಣಿಸುವಂತಾಗಿದೆ. ಕುತಂತ್ರಿ ಚೀನಾದ ನಡತೆ, ವಿಶ್ವಾಸಾರ್ಹತೆಯನ್ನು ಈಗ ಜಗತ್ತಿನ ಪ್ರಮುಖ ರಾಷ್ಟ್ರಗಳು ಪ್ರಶ್ನಿಸುತ್ತಿದ್ದು, ಭಾರತವು ಈ ಸಂಗತಿಯನ್ನು ಹಿಂದಿನ ಅನುಭವಗಳಿಂದ ಅರಿತಿದೆ. ಹೀಗಾಗಿ, ಚೀನಾಗೆ ಸಂಬಂಧಿಸಿದ ಸಣ್ಣಪುಟ್ಟ ಸಂಗತಿಗಳನ್ನು ಸಹ ಬಹು ಎಚ್ಚರಿಕೆಯಿಂದ ಪರಾಮಶಿಸಿ ಭಾರತ ಹೆಜ್ಜೆ ಇಡುವ ಅನಿವಾರ್ಯತೆ ಇದೆ.
ಬೆಟ್ಟಿಂಗ್, ಜೂಜು, ಅಕ್ರಮ ಸಾಲ ಸೇವೆಗಾಗಿ ಚೀನಾ ಕಂಪನಿಗಳು ಸೇರಿದಂತೆ ವಿದೇಶಿ ಸಂಸ್ಥೆಗಳು ಬಳಸುವ 232 ಆಪ್ಗಳನ್ನು ಭಾರತ ಸರ್ಕಾರವು ಕಳೆದ ಫೆಬ್ರುವರಿಯಲ್ಲಿ ನಿಷೇಧಿಸಿದೆ. ಎಲೆಕ್ಟಾ›ನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿಷೇಧಿಸಿರುವ ಈ ಆಪ್ಗಳಲ್ಲಿ 138 ಆಪ್ಗಳು ಬೆಟ್ಟಿಂಗ್, ಜೂಜು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದವುಗಳಾದರೆ, 94 ಆಪ್ಗಳು ಸಾಲ ಸೇವೆಯನ್ನು ಕಾನೂನುಬಾಹಿರವಾಗಿ ನೀಡುವಂತಹವು ಆಗಿವೆ. ಈಗ ಚೀನಾ ಉತ್ಪಾದಿಸುವ ಮೊಬೈಲ್ಫೋನ್ಗಳಲ್ಲಿ ಗೂಢಚರ್ಯ ಮಾಡಬಹುದಾದ ಅಂಶಗಳು ಇರುವ ಅನುಮಾನವನ್ನು ಗೂಢಚರ್ಯ ಸಂಸ್ಥೆಗಳು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ವ್ಯಾಪಕ ತಪಾಸಣೆ, ತನಿಖೆಯ ಅಗತ್ಯ ಗೋಚರಿಸುತ್ತದೆ.
ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿರುವ ಚೀನಾದ ವಿವಿಧ ಕಂಪನಿಗಳ ಮೊಬೈಲ್ಫೋನ್ಗಳಲ್ಲಿ ಬಳಸುವ ಸಾಫ್ಟ್ವೇರ್, ಆಪ್ಗಳನ್ನು ತನಿಖೆಗೆ ಒಳಪಡಿಸಿ ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಗೂಢಚರ್ಯ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿರುವಂತೆ ಈ ಮೊಬೈಲ್ಪೋನ್ಗಳಲ್ಲಿ ಸ್ಪೈವೇರ್ಗಳು ಕಂಡುಬಂದರೆ ತಕ್ಷಣವೇ ಈ ಫೋನ್ಗಳನ್ನು ಶಾಶ್ವತವಾಗಿ ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಸೈನಿಕರು ಮಾತ್ರವಲ್ಲ; ಎಲ್ಲ ಭಾರತೀಯರು ಇವುಗಳ ಬಳಕೆ ಮಾಡುವುದನ್ನು ತಪ್ಪಿಸಿದಂತಾಗುತ್ತದೆ. ಇದರಿಂದ ನಮ್ಮ ದೇಶದ ರಕ್ಷಣೆಗೆ ಒದಗಬಹುದಾದ ಅಪಾಯ ತಪು್ಪವುದಲ್ಲದೆ, ವಿದೇಶಿ ವಿನಿಮಯ ಉಳಿತಾಯಕ್ಕೂ ಅನುಕೂಲವಾಗಬಹುದಾಗಿದೆ. ಏಕೆಂದರೆ, ಭಾರತೀಯರು ಬಳಸುವ ಪ್ರಮುಖ ಬ್ರಾ್ಯಂಡ್ಗಳ ಪ್ರತಿ ಐದು ಫೋನ್ಗಳ ಪೈಕಿ ನಾಲ್ಕು ಅಂದರೆ, ಶೇ. 80ರಷ್ಟು ಚೀನಾಕ್ಕೆ ಸೇರಿದ ಕಂಪನಿಗಳು ಎಂಬುದು ವಾಸ್ತವ ಸಂಗತಿ. ಹೀಗಾಗಿ ಚೀನಾ ಜತೆಗಿನ ವ್ಯವಹಾರಗಳನ್ನು ಎಲ್ಲ ಆಯಾಮಗಳಿಂದಲೂ ಪರಾಮಶಿಸುವುದು ಅನಿವಾರ್ಯ.