ಕೃಷಿ ವಿವಿಗಳಲ್ಲಿ ತಂತ್ರಜ್ಞಾನ ಆವಿಷ್ಕಾರ ಕೇಂದ್ರ: 3 ವರ್ಷ ಅವಧಿಗೆ ಸ್ಥಾಪನೆ, ಖಾಸಗಿ ಕಂಪನಿ ಸಹಭಾಗಿತ್ವ..

State Krishi
Published on

ಬೆಂಗಳೂರು: ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಕ್ಯಾಂಪಸ್​ನಲ್ಲಿ ಅತ್ಯಾಧುನಿಕ ಕೃಷಿ ತಂತ್ರಜ್ಞಾನದ ಆವಿಷ್ಕಾರ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಾಫ್ಟ್​ವೇರ್ ಅಳವಡಿಕೆ ಮಾಡಿ ರೈತರಿಗೆ ಸಂಶೋಧನಾ ಫಲಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ 770 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 3 ವರ್ಷಗಳ ಅವಧಿಗೆ ಈ ಕೇಂದ್ರ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೆ.ಹೆಕ್ಸಾಗನ್ ಮ್ಯಾನ್ಯುಫ್ಯಾಕ್ಚರಿಂಗ್ ಇಂಟೆಲಿಜನ್ಸ್ ಇಂಡಿಯಾ ಕಂಪನಿ ಈ ಕೇಂದ್ರ ತೆರೆಲು ಮುಂದಾಗಿದೆ. ಒಂದು ಕೇಂದ್ರಕ್ಕೆ 110 ಕೋಟಿ ರೂ. ವೆಚ್ಚ ತಗುಲಲಿದ್ದು, ಆ ಪೈಕಿ 85 ಕೋಟಿ ರೂ.ಗಳನ್ನು ಕಂಪನಿ ವ್ಯಯಿಸುತ್ತದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ. ಹೊಸ ತಂತ್ರಜ್ಞಾನ ಅಭಿವೃದ್ಧಿ ನಿಟ್ಟಿನಲ್ಲಿ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಅಗ್ರಿ ಲ್ಯಾಬ್, ಇಂಕ್ಯೂಬೇಷನ್ ಸೆಂಟರ್ ಮಾಡಲಾಗುತ್ತದೆ ಎಂದರು.

ಶೇ.10 ಮೀಸಲು ನಿಗದಿ: ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲು ನಿಗದಿ ಮಾಡಿದೆ. ಅದರಲ್ಲಿ ಯಾವ ಯಾವ ಸಮುದಾಯಗಳನ್ನು ಸೇರಿಸಬೇಕು ಎಂಬುದರ ಬಗ್ಗೆ ರ್ಚಚಿಸಲಾಗಿದೆ. ಎಸ್​ಸಿ, ಎಸ್​ಟಿ, ಒಬಿಸಿ ಈ ಯಾವುದರಲ್ಲೂ ಸೇರ್ಪಡೆಯಾಗದೇ ಇರುವ ಮತ್ತು ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಮತ್ತು ಮೀಸಲಾತಿಯಿಂದ ಹೊರಗುಳಿದ ಸಮುದಾಯಗಳನ್ನು ಈ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಸಂಪುಟ ಸಭೆ ತೀರ್ವನಿಸಿದೆ. ಕೇಂದ್ರ ನಾಗರಿಕ ಸೇವಾ ನೇಮಕ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಇದು ಅನ್ವಯವಾಗಲಿದೆ.

ಶಿವಮೊಗ್ಗಕ್ಕೆ ಸಿಕ್ಕಿದ್ದೇನು?: ಶಿಮೊಗ್ಗದಲ್ಲಿ ಕರ್ನಾಟಕ ಆಯುಷ್ ವಿಶ್ವವಿದ್ಯಾಲಯ ಸ್ಥಾಪಿಸುವ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ನೀಡಿತು. ಗೋ ರಕ್ಷಾ ನ್ಯಾಸ್ ಸಮಿತಿಗೆ 9.32 ಎಕರೆ ಬಿ.ಕರಾಬು ಜಮೀನು ನೀಡಲು ಸಮ್ಮಿತಿಸಿತು. ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಫೆರಿಪಿರಲ್ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ 50 ಕೋಟಿ ರೂ.ಗೆ ಅನುಮೋದನೆ ದೊರೆಯಿತು.

ಮೌನಕ್ಕೆ ಶರಣಾಗಿದ್ದ ಬಿಎಸ್​ವೈ: ರಾಜಕೀಯ ಕಾರಣಗಳಿಗಾಗಿ ಮಹತ್ವದ ಪಡೆದುಕೊಂಡಿದ್ದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಕಾರವೆತ್ತದೆ, ಹಲವರ ನಿರೀಕ್ಷೆ ಹುಸಿಗೊಳಿಸಿದರು. ದೆಹಲಿಯಿಂದ ಮರಳಿದ ಬಳಿಕ ಬಹುತೇಕ ಸಚಿವರೊಂದಿಗೆ ಬಿಎಸ್​ವೈ ಮುಖಾಮುಖಿ ಚರ್ಚೆ ನಡೆಸಿದ್ದಿಲ್ಲ, ಜತೆಗೆ ಓಡಾಡಿದ ಸಚಿವರೊಂದಿಗೆ ಮಾತುಕತೆ ಔಪಚಾರಿಕತೆಗೆ ಸೀಮಿತವಾಗಿತ್ತು. ವರಿಷ್ಠರ ಸಂದೇಶಕ್ಕೆ ಕಾದಿರುವೆ, ಅವರ ಸೂಚನೆ ಪಾಲಿಸುವೆ ಎಂದು ಸಿಎಂ ಬಿಎಸ್​ವೈ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದರಿಂದ ಸಚಿವ ಸಹೋದ್ಯೋಗಿಗಳು ಕಾತರದಿಂದ ಕಾದಿದ್ದರು. ಆದರೆ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಂತೆ ಚರ್ಚೆ, ಒಪ್ಪಿಗೆಗಳಾದವು. ನಂತರವೂ ಬಿಎಸ್​ವೈ ಬೇರೆ ವಿಚಾರಗಳನ್ನು ಪ್ರಸ್ತಾಪಿಸಲಿಲ್ಲ.

ವಲಸಿಗ ಸಚಿವರ ದಿಗಿಲು: ಬಿಎಸ್​ವೈ ರಾಜಕೀಯ ವಿಷಯ ಪ್ರಸ್ತಾಪಿಸದ ಕಾರಣ ವಲಸಿಗ ಸಚಿವರು ಮತ್ತಷ್ಟು ದಿಗಿಲುಗೊಂಡು ನೇರ ಭೇಟಿಗೆ ತವಕಿಸಿದರು. ಸಭೆ ಮುಗಿಯುತ್ತಲೇ ಬಿಎಸ್​ವೈ ಅವರನ್ನು ಹಿಂಬಾಲಿಸಿ ಸಿಎಂ ಕೊಠಡಿಯಲ್ಲಿ ಬಹು ಹೊತ್ತು ರ್ಚಚಿಸಿದರು. ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಎಂ.ಟಿ.ಬಿ.ನಾಗರಾಜ್ ಮತ್ತು ಕೆ.ಗೋಪಾಲಯ್ಯ ಅವರಿಗೆ ಆತಂಕ ಬೇಡವೆಂಬ ಸಲಹೆ ನೀಡಿದ ಸಿಎಂ ಬಿಎಸ್​ವೈ, ನಿರ್ದಿಷ್ಟವಾಗಿ ಯಾವುದೇ ಭರವಸೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇತರ ಪ್ರಮುಖ ನಿರ್ಣಯಗಳು

  • ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅಲವಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಅನುಮೋದನೆ. ಯೋಜನೆಗೆ ವಾರ್ಷಿಕ 250 ಕೋಟಿ ರೂ. ವೆಚ್ಚಕ್ಕೆ ಮಂಜೂರಾತಿ.
  • 35-45 ಲಕ್ಷ ರೂ. ಮೊತ್ತದ ಪ್ಲಾಟ್/ಅಪಾರ್ಟ್​ವೆುಂಟ್ ನೋಂದಣಿಗೆ ಮುದ್ರಾಂಕ ಶುಲ್ಕ ಶೇ. 5 ರಿಂದ ಶೇ.3 ಇಳಿಕೆ ಮಾಡ ಲಾಗಿದೆ. ಈ ಪ್ಲಾಟ್ ಮತ್ತು ಅಪಾರ್ಟ್​ವೆುಂಟ್ ಮಾರ್ಗಸೂಚಿ ದರ ಮರು ಪರಿಶೀಲನೆಗೆ ಒಳಪಡಿಸಲು ತೀರ್ವನ.
  • ಬೆಂಗಳೂರು ಜಲಮಂಡಳಿಯ ಕೋರಮಂಗಲ ಹಾಗೂ ಚಲ್ಲಘಟ್ಟ ಕಣಿವೆಯಲ್ಲಿರುವ ಪ್ರಸ್ತುತ 248 ದಶಲಕ್ಷ ಲೀ. ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿಗದಿಪಡಿಸಿರುವ ಮಾನದಂಡಗಳಿಗೆ ಸರಿಹೊಂದುವಂತೆ ಉನ್ನತೀಕರಿಸುವ ಕಾಮಗಾರಿಗೆ 718 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಒಪ್ಪಿಗೆ.
  • ಕೆ.ಸಿ. ವ್ಯಾಲಿ ಯೋಜನೆ 248 ಎಂಎಲ್ ಡಿ ನೀರು ಶುದ್ಧೀಕರಣಕ್ಕೆ ಉನ್ನತೀಕರಣಕ್ಕೆ 718 ಕೋಟಿ ರೂ. ಡಿಪಿಆರ್​ಗೆ ಅನುಮತಿ.
  • ಕೊಪ್ಪಳ ಜಿಲ್ಲೆ ಹಿರೇಹಳ್ಳ ಯೋಜನೆ 507 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳೀತಾತ್ಮಕ ಅನುಮೋದನೆ.
  • ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ 126 ಕೋಟಿ ರೂ. ಗಳ ಪ್ರಸ್ತಾವನೆಗೆ ಆತಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಆರೋಗ್ಯ ಇಲಾಖೆಯಿಂದ ಮಹಾದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿ 250 ಹಾಸಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ ನೀಡಿದ್ದೇವೆ. 180 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ ಕಟ್ಟಡ ನಿರ್ವಣಕ್ಕೆ 137 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ.
  • ಹೊನ್ನಾಳಿ ತಾಲೂಕು ನ್ಯಾಮತಿ ಪಟ್ಟಣದಲ್ಲಿ ಪಿ.ವಿ. ಆಂಜನೇಯ ದೇವಸ್ಥಾನ ಬೀದಿ 1.7 ಕಿ.ಮೀ. ರಸ್ತೆ ಅಭಿವೃದ್ಧಿ, ನ್ಯಾಮತಿ ಪಟ್ಟಣದಲ್ಲಿ ಅಲಂಕಾರಿಕ ದೀಪ ಅಳವಡಿಸಿ, ಹೊನ್ನಾಳಿ ತಾಲೂಕಿನ ರಾ. ಹೆ. 48 ರಲ್ಲಿ ರಸ್ತೆ ವಿಭಜಕ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ 25 ಕೋಟಿ ರೂ. ಗಳಿಗೆ ಅನುಮೋದನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net