

ಡಿಜಿಟಲ್ ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಜನರ ಸೈಕಾಲಜಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಟೆಕ್ನಾಲಜಿ ಎಷ್ಟು ಮುಖ್ಯವೋ ಅದರ ಅನುಷ್ಠಾನಕ್ಕೆ ಸೈಕಾಲಜಿಯೂ ಅಷ್ಟೇ ಮುಖ್ಯ. ತಾಂತ್ರಿಕವಾಗಿ ನಾವು ಅದೆಷ್ಟೇ ಮುಂದುವರಿದಿದ್ದರೂ ಮಾನಸಿಕವಾಗಿ ಸದೃಢತೆ ತುಂಬಾ ಅಗತ್ಯ. ಇದರಲ್ಲಿ ಏರುಪೇರಾದರೆ ಆಗುವ ತಲ್ಲಣಗಳು ಉಂಟಾಗುವ ಬಿಕ್ಕಟ್ಟಿಗೆ ಈ ಉದಾಹರಣೆಯೇ ಉತ್ತಮ ನಿದರ್ಶನ.
ಪಾಪ, ಆಕೆಯದೂ ಇದರಲ್ಲಿ ಪೂರ್ಣ ಪ್ರಮಾಣದ ತಪ್ಪಿಲ್ಲ. ಬಾಲ್ಯದಿಂದಲೇ ಓದಿನಲ್ಲಿ ಚುರುಕಾಗಿದ್ದ ಈಕೆ ಚೆನ್ನಾಗಿ ಓದಿದಳು. ಹೆತ್ತವರ ಕನಸಿನಂತೆ ಉನ್ನತ ಶಿಕ್ಷಣ ಪಡೆದಳು. ಅದಕ್ಕೆ ತಕ್ಕಂತೆ ಉದ್ಯೋಗವೂ ಸಿಕ್ಕಿತು. ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆಯ ತುಡಿತವೂ ಆಕೆಯಲ್ಲಿತ್ತು. ಆ ನಿಟ್ಟಿನಲ್ಲಿ ಯತ್ನವೂ ಜೋರಾಗಿತ್ತು. ಈ ಮಧ್ಯೆ ಕಳೆದ ಆಯಸ್ಸಿನ ಅರಿವೇ ಆಕೆಗಿರಲಿಲ್ಲ. ತಂದೆ ತಾಯಿ ಆಗಾಗ್ಗೆ ಮದುವೆ ವಿಷಯ ಪ್ರಸ್ತಾಪ ಮಾಡುತ್ತಲೇ ಬರುತ್ತಿದ್ದರು. ಅದಕ್ಕೇನು ಅವಸರ? ಸಾಧನೆ ಮಾಡಿದ ನಂತರ ಗಂಡುಗಳ ಸರದಿಯೇ ಮನೆ ಮುಂದೆ ನಿಲ್ಲುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಆಕೆಯದ್ದಾಗಿತ್ತು. ನೋಡು ನೋಡುತ್ತಾ ವಯಸ್ಸು ಉರುಳಿದವು. ಕೊನೆಗೆ ಆಕೆ ಅಂದುಕೊಂಡಂತೆ ಸಾಧನೆಯ ಒಂದು ಹಂತಕ್ಕೂ ತಲುಪಿ ಆಯಿತು. ಇನ್ನು ಮದುವೆಯತ್ತ ಗಮನ ಹರಿಸೋಣ ಎಂದು ಆ ಬಗ್ಗೆ ಚಿಂತನೆಗೆ ಮುಂದಾದ ಆಕೆಗೆ ಯಾವ ಗಂಡೂ ಸಿಗಲಿಲ್ಲ. ಒಂದೆಡೆ ವಯಸ್ಸು, ಇನ್ನೊಂದೆಡೆ ಸಾಧನೆ ಬಗ್ಗೆ ಆಕೆಗಿದ್ದ ಅತಿಯಾದ ಹೆಮ್ಮೆ ಮದುವೆಗೆ ವಿಘ್ನವಾಗಿತ್ತು. ಉದ್ಯೋಗ, ಆಶ್ರಯ, ಸಂಪತ್ತು ಎಲ್ಲವೂ ಇದ್ದರೂ ಯಾರೊಬ್ಬರೂ ಕೈ ಹಿಡಿಯಲು ಮುಂದಾಗದಿರುವ ಚಿಂತೆ ಕಾಡಲಾರಂಭಿಸಿತು.
ಈ ಮಧ್ಯೆ ಕಂಪನಿಯ ಸಹೋದ್ಯೋಗಿ ಜತೆಗಿನ ಲೀವಿಂಗ್ ಟು ಗೆದರ್ ರಿಲೇಶನ್ಶಿಪ್ ಇಷ್ಟು ದಿನ ಜೀವನ ಸಂಗಾತಿಯ ಕೊರತೆ ಬಗ್ಗೆ ಯೋಚನೆ ಬರದ ಹಾಗೆ ನೋಡಿಕೊಂಡಿತ್ತು. ಯಾವಾಗ ಮನೆಯವರು ಗಂಭೀರವಾಗಿ ಮದುವೆಗೆ ಬೆನ್ನು ಹತ್ತಿದರೋ ಆವಾಗ ಶುರುವಾಯಿತು ನೋಡಿ ನಿಜವಾದ ಸಂಕಟ ಮತ್ತು ಸಂಕಷ್ಟ. ಲೀವಿಂಗ್ ಟುಗೆದರ್ ರಿಲೇಶನ್ಶಿಪ್ ಏನಿದ್ದರೂ ತಾತ್ಕಾಲಿಕ. ಇದು ನ್ಯಾಯಸಮ್ಮತವೂ ಅಲ್ಲ. ಸಮಾಜ ಒಪ್ಪಿತವೂ ಅಲ್ಲ. ಮೇಲಾಗಿ ಇಲ್ಲಿ ಸಂಬಂಧಗಳಿಗೆ ಬೆಲೆಯೂ ಇರುವುದಿಲ್ಲ, ನೆಲೆಯೂ ಇರುವುದಿಲ್ಲ. ಇಲ್ಲಿ ಇಗೋ ಸಂಘರ್ಷದಿಂದ ಒಂದು ದಿನ ಪಾರ್ಟನರ್ ಅಗಲುತ್ತಾನೆ. ಆಗ ಏಕಾಂತ ಆವರಿಸುತ್ತದೆ. ಬಾಳ ಪಯಣದಲ್ಲಿ ಜತೆಜತೆಯಾಗಿ ಸಾಗಲು ಸಂಗಾತಿಯ ಅಗತ್ಯ ಮನವರಿಕೆಯಾಗುತ್ತದೆ. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ. ಬೇಕು ಎಂದು ಅಂಗಲಾಚಿದರೂ ಸಿಗುವುದು ಕಷ್ಟದ ಮಾತು. ಇದರಿಂದ ಹೆತ್ತವರ ಆತಂಕವೂ ಹೆಚ್ಚಾಗುತ್ತದೆ. ಸಮಾಜದಲ್ಲಿ ಆಡಿಕೊಳ್ಳುವವರ ಬಾಯಿಗೆ ಆಹಾರವಾಗುತ್ತೇವೆ. ಪರಿಣಾಮ ಖಿನ್ನತೆ ಆವರಿಸುತ್ತದೆ. ಇದಕ್ಕೆಲ್ಲ ಪರಿಹಾರ ಎಂದರೆ ಹಿರಿಯರ ಮಾತಿನ ಪಾಲನೆ.
ಹೌದು, ಯಾವಯಾವ ವಯಸ್ಸಿನಲ್ಲಿ ಏನು ಆಗಬೇಕೋ ಅದು ಆದರೆ ಈ ತರಹದ ಸಮಸ್ಯೆಯೇ ಉದ್ಭವಿಸುವುದಿಲ್ಲ. ಬಾಲ್ಯ, ಯೌವ್ವನ, ಮದುವೆ, ಮಕ್ಕಳು ಎಂದೆಲ್ಲಾ ಕಾಲಕಾಲಕ್ಕೆ ನಿರ್ಧರಿಸುವ ಘಟ್ಟಗಳು ಸರಿಯಾಗಿಯೇ ಇರುತ್ತವೆ. ಇದು ಜೀವನದ ಹಾದಿಯನ್ನು ಸುಗಮವಾಗಿಸುತ್ತವೆ. ಈಗ ನೋಡಿ ಈ ಮಹಿಳೆಗೆ ಎಲ್ಲವೂ ಇದೆ. ಆದರೆ ಅದನ್ನು ಅನುಭವಿಸಲು ಸಂಗಾತಿಯೇ ಇಲ್ಲ. ಆ ಸಂಗಾತಿಯನ್ನು ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಆಕೆಯ ದುಡ್ಡು, ಸಂಪತ್ತು ನೋಡಿ ಯಾರಾದರೂ ಮದುವೆಯಾದರೂ ಆತನ ಉದ್ದೇಶ ಆಕೆಯ ಸಂಪತ್ತು ಹೊರತು ಸಂಸಾರ ನಡೆಸುವುದರಲ್ಲಿ ಅಲ್ಲ ಎಂಬುದು ಸ್ಪಷ್ಟ.
ನಾನು ಕೂಡ ಹೇಳುವುದು ಅದನ್ನೇ. ಇಂದಿನ ಯುವತಿಯರಿಗೆ ಓದು, ಉದ್ಯೋಗ ಅಗತ್ಯ. ಅದರ ಜತೆ ಜತೆಗೆ ವಯಸ್ಸಿಗೆ ತಕ್ಕಂತೆ ಏನೇನು ನಡೆಯಬೇಕೋ ಅದು ನಡೆಯಲೇಬೇಕು. ಸಬೂಬು ಹೇಳಿ ಶುಭಕಾರ್ಯಗಳನ್ನು ಮುಂದೂಡುವುದರಲ್ಲಿ ಅರ್ಥವಿಲ್ಲ. ಇದನ್ನು ಅರಿತು ಸಾಗಿದರೆ ಹೆತ್ತವರಿಗೂ ಸುಖ ತಮಗೂ ಹಿತ.