ನೇಪಾಳ ನೂತನ ಪ್ರಧಾನಿ ಆಯ್ಕೆಗೆ ತಂತ್ರಜ್ಞಾನದ ನೆರವು

sharma
Published on

ಕಾಠ್ಮಂಡು: ಪ್ರಮುಖವಾಗಿ ಭ್ರಷ್ಟಾಚಾರ ಹಾಗೂ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನೇ ನೆಪವಾಗಿರಿಸಿಕೊಂಡು ಹಿಂಸಾತ್ಮಕ ಪ್ರತಿಭಟನೆ ಮೂಲಕ ನೇಪಾಳದ ಕೆ.ಪಿ. ಶಮಾ ಓಲಿ ಸರ್ಕಾರವನ್ನು ಉರುಳಿಸಿದ ‘ಜೆನ್ ಝಿ’ ಹೋರಾಟಗಾರರು, ಹೊಸ ಪ್ರಧಾನಿಯ ಆಯ್ಕೆಗೆ ಮಾಹಿತಿ ತಂತ್ರಜ್ಞಾನದ ಭಾಗವಾದ ಒಂದು ಸಾಮಾಜಿಕ ಮಾಧ್ಯಮವನ್ನೇ ಬಳಸಿರುವುದು ವಿಶೇಷವಾಗಿದೆ. ಅಮೆರಿಕದ ಸಾಮಾಜಿಕ ಮಾಧ್ಯಮ ಆಪ್ ‘ಡಿಸ್ಕಾರ್ಡ್’ ಮೂಲಕ ಮಧ್ಯಂತರ ಸರ್ಕಾರದ ನೂತನ ಪ್ರಧಾನಿಯಾಗಿ ಸುಶೀಲಾ ರ್ಕಾಯನ್ನು ಆಯ್ಕೆ ಮಾಡಲಾಗಿದೆ.

ಜನಪ್ರಿಯ ಚಾಟ್ ಆಪ್ ಆಗಿರುವ ‘ಡಿಸ್ಕಾರ್ಡ್’ನಲ್ಲಿ ಸುಮಾರು ಒಂದು ಲಕ್ಷ ಪ್ರತಿಭಟನಾಕಾರರು ಭಾಗಿಯಾಗಿ ರ್ಚಚಿಸಿ ಸೂಚಿತ ಏಕೈಕ ಹೆಸರಾದ ಸುಶೀಲಾ ಅವರನ್ನು ಪ್ರಧಾನಿ ಎಂದು ನಿರ್ಧರಿಸಿದ್ದಾರೆ. ‘ಡಿಸ್ಕಾರ್ಡ್ ಈಗ ನೇಪಾಳದ ಸಂಸತ್ತು’ ಎಂದು ಈ ಆಯ್ಕೆ ವೇಳೆ ಕಂಟೆಂಟ್ ಕ್ರಿಯೇಟರ್ ಆದ ಸಿದ್ ಘಿಮಿರಿ ಹೇಳಿದ್ದ್ದು, ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ ಬಹುತೇಕರು 28 ವರ್ಷಗಳ ಒಳಗಿನವರು ಎಂದು ವರದಿಯಾಗಿದೆ.

ಓಲಿ ರಾಜೀನಾಮೆ ನೀಡಿ ಪಲಾಯನಗೈದಿರುವುದರಿಂದ ಹಾಗೂ ಇತರ ರಾಜಕೀಯ ನೇತಾರರಲ್ಲಿ ವಿಶ್ವಾಸ ಇಲ್ಲದಿರುವುದರಿಂದ ಮುಂದಿನ ನಾಯಕರನ್ನು ಆರಿಸುವ ವಿಚಾರದಲ್ಲಿ ಜೆನ್ ಝಿ ಕವಲು ದಾರಿಯಲ್ಲಿ ನಿಂತಿದ್ದರಿಂದ ಆನ್​ಲೈನ್ ವೇದಿಕೆ ಡಿಸ್ಕಾರ್ಡ್ ಮೊರೆ ಹೋದರು ಎನ್ನಲಾಗಿದೆ.

ಏನಿದು ಡಿಸ್ಕಾರ್ಡ್?

ಅಮೆರಿಕದ ಜೇಸನ್ ಸಿಟ್ರಾನ್ ಮತ್ತು ಸ್ಟಾನಿಸ್ಲಾವ್ ವಿಶ್ನೆವ್​ಸ್ಕಿ 2015ರ ಮೇ ತಿಂಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಡಿಸ್ಕಾರ್ಡ್ ಸಂಯುಕ್ತವಾಗಿ ಆರಂಭಿಸಿದ್ದರು. ಅದಕ್ಕೂ ಮುನ್ನ ಅವರಿಬ್ಬರೂ ಗೇಮರ್​ಗಳಿಗಾಗಿ ಸಾಮಾಜಿಕ ವೇದಿಕೆಗಳನ್ನು ಸೃಷ್ಟಿಸಿದ್ದರು. ಆಟಗಳನ್ನು ಆಡುವಾಗ ಅದಕ್ಕೆ ಅಡ್ಡಿಯಾಗದಂತೆ ಚಾಟ್ ಸರ್ವಿಸ್ ಸೖಷ್ಟಿಸುವುದು ಅವರ ಆಶಯವಾಗಿತ್ತು. 2016ರ ಅಂತ್ಯದ ವೇಳೆಗೆ ಡಿಸ್ಕಾರ್ಡ್ 25 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿತ್ತು. ಕರೊನಾ ಸಾಂಕ್ರಾಮಿಕತೆ ವೇಳೆ ಈ ವೇದಿಕೆಯು ವಿಶೇಷವಾಗಿ ಜೆನ್ ಝಿ ನಡುವೆ ಅಪಾರ ಜನಪ್ರಿಯತೆ ಗಳಿಸಿತ್ತು. ಟೆಕ್ಸ್ಟ್​ ಆಡಿಯೋ-ವಿಡಿಯೋ ಈ ಮೂರೂ ವಿಧಾನದಲ್ಲಿ ಸಂವಹನ ನಡೆಸಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ನ್ಯಾಯಾಂಗ ದಾಖಲೆಗಳು ನಾಶ

ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳ ವೇಳೆ ದೇಶದ ನ್ಯಾಯಾಂಗದ ಇತಿಹಾಸದ ಭಾಗವಾದ ಕೆಲವು ಪ್ರಮುಖ ದಾಖಲೆಪತ್ರಗಳು ಬಹುತೇಕ ನಾಶವಾಗಿವೆ ಎಂದು ನೇಪಾಳದ ಸುಪ್ರೀಂಕೋರ್ಟ್ ಶನಿವಾರ ತಿಳಿಸಿದೆ. ಕೋರ್ಟ್ ಕಲಾಪಗಳನ್ನು ಶೀಘ್ರವೇ ಪುನಾರಂಭಿಸಲಾಗುತ್ತದೆ ಹಾಗೂ ಯಾವುದೇ ಸನ್ನಿವೇಶದಲ್ಲಿ ನ್ಯಾಯ ಒದಗಿಸಲು ಸಂಕಲ್ಪಬದ್ಧರಾಗಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್​ ಸಿಂಗ್ ರಾವುತ್ ಘೋಷಿಸಿದ್ದಾರೆ.

ಮೋದಿ ಅಭಿನಂದನೆ

ನೇಪಾಳದ ಹಂಗಾಮಿ ಪ್ರಧಾನಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿರುವ ಸುಶೀಲಾ ರ್ಕಾಯವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಿಮಾಲಯ ದೇಶದ ಪ್ರಗತಿಗೆ ನೆರವಾಗಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net