

ಶಿವಮೊಗ್ಗ: ಪ್ರತೀ ತಂತ್ರಜ್ಞಾನವನ್ನು ಈ ಹಿಂದಿನ ಸಮಸ್ಯೆ ನಿವಾರಿಸಲು ಆವಿಷ್ಕಾರಿಸಲಾಗುತ್ತದೆ. ಆದರೆ ಒಳಿತು ಮತ್ತು ಕೆಡುಕುಗಳು ಅವುಗಳನ್ನು ಬಳಸುವವರ ಮೇಲೆ ನಿರ್ಧರಿತವಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಪತ್ರಿಕೋದ್ಯಮವನ್ನು ನಾವು ಅದೇ ಹಿನ್ನಲೆಯಲ್ಲಿ ಕಾಣಬೇಕಿದೆ ಎಂದು ತಮಿಳುನಾಡಿನ ಅಣ್ಣಾ ವಿವಿಯ ಇಎಂಆರ್‌ಸಿ(ವಿದ್ಯುನ್ಮಾನ ಮತ್ತು ಬಹುಮಾಧ್ಯಮ ಸಂಶೋಧನ ಕೇಂದ್ರ) ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ ಹೇಳಿದರು.
ಕುವೆಂಪು ವಿವಿಯ ಪ್ರೊ. ಎಸ್.ಪಿ.ಹಿರೇಮಠ್ ಸಭಾಂಗಣದಲ್ಲಿ ಗುರುವಾರ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘಗಳ ಆಶ್ರಯದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್.ಪೂರ್ಣಾನಂದ ಅವರ ಗೌರವಾರ್ಥ ಡಿಜಿಟಲ್ ಪತ್ರಿಕೋದ್ಯಮ: ಸವಾಲುಗಳು ಮತ್ತು ನಿರೀಕ್ಷೆಗಳು ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣೆ ಮಾಡಿದರು.
ಕರೊನಾ ನಂತರ ಡಿಜಿಟಲ್ ತಾಣಗಳು ಅಪಾರವಾಗಿ ಹೆಚ್ಚಾಗಿವೆ. ತಂತ್ರಜ್ಞಾನ ಯಾವುದೇ ಆದರೂ ವಿಷಯ ಎಂದಿಗೂ ಒಂದೇ. ಸುದ್ದಿ ನೀಡುವಿಕೆ ಮತ್ತು ಸಾರ್ವಜನಿಕ ಹಿತ ಕಾಯುವುದೇ ಪತ್ರಿಕೋದ್ಯಮಕ್ಕೆ ಮುಖ್ಯವಾಗಬೇಕು. ಈ ಹಿನ್ನಲೆಯಲ್ಲಿ ಡಿಜಿಟಲ್ ಮಾಧ್ಯಮದ ವೇಗ, ಬಳಕೆದಾರ ಸ್ನೇಹಿ ಗುಣ, ಕಡಿಮೆ ವೆಚ್ಚಗಳನ್ನು ಪೂರಕವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಡಾ. ಎಂ.ಆರ್.ಸತ್ಯಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ.ನವೀನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈದಿನ ಸುದ್ದಿತಾಣದ ಮುಖ್ಯಸಂಪಾದಕ ಡಿ.ಆರ್.ಅಶೋಕ್‌ರಾಮ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್.ಪೂರ್ಣಾನಂದ, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಪ್ರೊ. ಸತೀಶ್‌ಕುಮಾರ್, ಪ್ರಾಧ್ಯಾಪಕ ಪ್ರೊ. ವರ್ಗೀಸ್, ಡಾ. ರಾಘವೇಂದ್ರ ಉಪಸ್ಥಿತರಿರಿದ್ದರು.