ಚಂದ್ರಯಾನ-3ರಲ್ಲಿ ಕೆಲಸ ಮಾಡಿದ ತಂತ್ರಜ್ಞನಿಂದ ಇಡ್ಲಿ ಮಾರಾಟ!

Technician Who Worked In The Chandrayaan 3 Launch Is Now Selling Idlis Which Is Heart Wrenching
Published on

ನವದೆಹಲಿ: ಚಂದ್ರಯಾನ-3 ಉಡಾವಣಾ ಕೇಂದ್ರದ ನಿರ್ಮಾಣದಲ್ಲಿ ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ, ಜಾರ್ಖಂಡ್‌ ರಾಜಧಾನಿ ರಾಂಚಿಯ ರಸ್ತೆಬದಿಯಲ್ಲಿ ಇಡ್ಲಿಗಳನ್ನು ಮಾರುತ್ತಾರೆ. ಈ ಸುದ್ದಿ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಈ ವರದಿಯನ್ನು ಸರ್ಕಾರ ನಿರಾಕರಿಸಿದೆ

ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಿಸಲು ಸಹಕರಿಸಿದ್ದ HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ನ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ ಅವರು ಜಾರ್ಖಂಡ್‌ ರಾಜಧಾನಿ ರಾಂಚಿಯ ರಸ್ತೆಬದಿಯ ಅಂಗಡಿಯಲ್ಲಿ ಇಡ್ಲಿ ಮಾರುತ್ತಿದ್ದಾರೆ. ದೀಪಕ್ ಕುಮಾರ್ ರಾಂಚಿಯ ಧುರ್ವಾ ಪ್ರದೇಶದಲ್ಲಿ ಹಳೆಯ ಶಾಸನ ಸಭೆಯ ಎದುರು ಅಂಗಡಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ದೀಪಕ್ ಕುಮಾರ್ ಉಪ್ರಾರಿಯಾ ಅವರು ಚಂದ್ರಯಾನ-3 ಉಡಾವಣಾ ಕೇಂದ್ರದ ನಿರ್ಮಾಣದಲ್ಲಿ ಕೆಲಸ ಮಾಡಿದರು. ಅವರು HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ನಲ್ಲಿ ತಾಂತ್ರಿಕ ಪರಿಣತರಾಗಿದ್ದಾರೆ. ಈ ಪ್ರಯೋಗದಲ್ಲಿ ಚಂದ್ರಯಾನ-3 ಗಾಗಿ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್ ಅನ್ನು ಭಾರತ ಸರ್ಕಾರದ ಕಂಪನಿ (CPSU) HEC ತಯಾರಿಸಿದೆ ಎಂದು ತಿಳಿದುಬಂದಿದೆ. ಆದರೆ ದೀಪಕ್ ಅವರು ಕೆಲಸ ಮಾಡಿದ ಎಚ್‌ಇಸಿ ಕಂಪನಿ 18 ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ರಸ್ತೆ ಬದಿ ಅಂಗಡಿ ತೆರೆಯಬೇಕಾಯಿತು. ಎಚ್‌ಇಸಿಯಲ್ಲಿ ಸುಮಾರು 2,800 ಜನರು ತಮ್ಮ ಸಂಬಳವನ್ನು ಪಡೆದಿಲ್ಲ ಎನ್ನಲಾಗಿದೆ.

ಚಂದ್ರಯಾನ-3 ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಚಂದ್ರಯಾನ ಮಿಷನ್ ಲಾಂಚ್ ಪ್ಯಾಡ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಆ ಸಮಯದಲ್ಲಿ ರಾಂಚಿಯ HEC ನೌಕರರು ತಮ್ಮ 18 ತಿಂಗಳ ಸಂಬಳದ ಬಾಕಿಯನ್ನು ವಿರೋಧಿಸಿ ತಮ್ಮ ಧ್ವನಿಯನ್ನು ಎತ್ತಿದರು. ಸಂಬಳ ಸಿಗದವರಲ್ಲಿ ದೀಪಕ್ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಈ ಕುರಿತಾಗಿ ಮಾತನಾಡಿದ ಅವರು ಕೆಲವು ದಿನಗಳಿಂದ ಮನೆಯ ಅಗತ್ಯಗಳನ್ನು ಪೂರೈಸಲು ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದೇನೆ, ಬೆಳಿಗ್ಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದೇನೆ ಮತ್ತು ಮಧ್ಯಾಹ್ನ ಕಚೇರಿಗೆ ಹೋಗುತ್ತಿದ್ದೇನೆ ಎಂದು ಉಪ್ರಾರಿಯಾ ಮಾಧ್ಯಮಗಳಿಗೆ ತಿಳಿಸಿದರು. ಕೆಲ ದಿನಗಳಿಂದ ಸಂಬಂಧಿಕರು, ಕ್ರೆಡಿಟ್ ಕಾರ್ಡ್ ಗಳಿಂದ ಸಾಲ ಮಾಡಿ ಜೀವನ ಸಾಗಿಸಲು ಪರದಾಡುತ್ತಿದ್ದರಿಂದ ಇಡ್ಲಿ ಮಾರಾಟ ಮಾಡುತ್ತಿದ್ದೇನೆ.ಇದುವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನರು ಸಾಲ ನೀಡುವುದನ್ನು ನಿಲ್ಲಿಸಿದ್ದಾರೆ. ನಂತರ ನಾನು ನನ್ನ ಹೆಂಡತಿಯ ಆಭರಣಗಳನ್ನು ಅಡಮಾನವಿಟ್ಟು ಕೆಲವು ದಿನ ಮನೆ ನಡೆಸಿದ್ದೇನೆ. ನನ್ನ ಹೆಂಡತಿ ಒಳ್ಳೆಯ ಇಡ್ಲಿ ಮಾಡುತ್ತಾಳೆ. ಅದನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂಪಾಯಿ ಸಿಗುತ್ತವೆ. ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆ ನಡೆಸುತ್ತಿದ್ದೇನೆ" ಎಂದೂ ಅವರು ಹೇಳಿದ್ದಾರೆ. 

ದೀಪಕ್ ಕುಮಾರ್ ಉಪ್ರಾರಿಯಾ ಮಧ್ಯಪ್ರದೇಶದ ಹರ್ದಾ ಮೂಲದವರು. 2012ರಲ್ಲಿ ರೂ.8000 ವೇತನದೊಂದಿಗೆ ಹೆಚ್ ಇಸಿಗೆ ಸೇರಿದರು. ಮನ್ನಣೆ ಸಿಗುತ್ತದೆ ಎಂದು ನಿರೀಕ್ಷಿಸಿದ್ದ ತನಗೆ ಇಂತಹ ಪರಿಸ್ಥಿತಿ ಬರಬಹುದೆಂದು ನಿರೀಕ್ಷಿಸಿರಲಿಲ್ಲ ಎಂದು ದೀಪಕ್ ಅಳಲು ತೋಡಿಕೊಂಡಿದ್ದಾರೆ. ಸದ್ಯ ಇಬ್ಬರು ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದಾರೆ. ದೀಪಕ್‌ನಂತಹ ಹೆಚ್‌ಇಸಿಯಿಂದ ಸಂಬಳ ಪಡೆಯದವರೆಲ್ಲರೂ ಈ ರೀತಿಯ ಜೀವನೋಪಾಯವನ್ನು ಹುಡುಕುತ್ತಿರುವಂತೆ ತೋರುತ್ತದೆ.

 HEC ಚಂದ್ರಯಾನ-3 ಗಾಗಿ ಯಾವುದೇ ಘಟಕವನ್ನು ಮಾಡಿಲ್ಲ ಮತ್ತು 2003 ಮತ್ತು 2010 ರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೆ ಕೆಲವು ಮೂಲಸೌಕರ್ಯಗಳನ್ನು ಮಾತ್ರ ಒದಗಿಸಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (PIB) ಫ್ಯಾಕ್ಟ್-ಚೆಕ್ ಯುನಿಟ್ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net