

ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಅಪಾರ್ಟ್‌ಮೆಂಟ್‌ನ 21ನೇ ಮಹಡಿಯಿಂದ ಸಾಫ್ಟ್‌ವೇರ್ ಉದ್ಯೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಜಾಪುರ ರಸ್ತೆಯ ಜೈನ್ ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿ ಸಾರಂಗ್ ಕುಲಕರ್ಣಿ (29) ಮೃತ ಟೆಕ್ಕಿ. ತನ್ನ ಫ್ಲ್ಯಾಟ್‌ನ ಕೋಣೆಯಿಂದ ನಸುಕಿನ 4 ಗಂಟೆಯಲ್ಲಿ ಸಾರಂಗ್ ಕೆಳಗೆ ಬಿದ್ದಿದ್ದಾನೆ. ಕೂಡಲೇ ರಕ್ಷಣೆಗೆ ಭದ್ರತಾ ಸಿಬ್ಬಂದಿ ತೆರಳಿದ್ದು, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಧಾರವಾಡದ ಸಾರಂಗ್, ಬೆಳ್ಳಂದೂರು ಸಮೀಪ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಜೀವನ್‌ಬಿಮಾ ನಗರದಲ್ಲಿ ಆತನ ಪಾಲಕರು ನೆಲೆಸಿದ್ದಾರೆ. ಸರ್ಜಾಪುರ ರಸ್ತೆಯ ಫ್ಲ್ಯಾಟ್ ಬಾಡಿಗೆ ಪಡೆದು ಪ್ರತ್ಯೇಕವಾಗಿ ನೆಲೆಸಿದ್ದ. ಈ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ವೈಯಕ್ತಿಕ ವಿಚಾರವಾಗಿ ಆತ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು. ಮೃತನ ಕೋಣೆಯಲ್ಲಿ ಮರಣಪತ್ರ ಪತ್ತೆ ಸಹ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.