

ನವದೆಹಲಿ: ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವಪ್ಪಿದ ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅವರ ಪಾರ್ಥಿವ ಶರೀರಕ್ಕೆ ಇಂದು ಅಂತಿಮ ನಮನ ಸಲ್ಲಿಸಲಾಯಿತು. ದೆಹಲಿಯ ಬ್ರಾರ್ ಸ್ಕ್ವೇರ್ ಕ್ರೆಮೆಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಿರಿಯ ಸೇನಾಧಿಕಾರಿಗಳು ಹೂಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು.
ದಿವಂಗತ ಲಿಡ್ಡರ್ ಅವರ ಪತ್ನಿ ಗೀತಿಕಾ, ಅವರ ಪಾರ್ಥಿವ ಶರೀರವಿರಿಸಿದ್ದ ರಾಷ್ಟ್ರಧ್ವಜದಿಂದ ಸುತ್ತಲಾಗಿದ್ದ ಶವಪೆಟ್ಟಿಗೆಗೆ ರೋಧಿಸುತ್ತಾ ಮುತ್ತಿಟ್ಟರು. ಅವರ 17 ವರ್ಷದ ಪುತ್ರಿ ಆಶ್ನಾ ಕಣ್ಣೀರಿನೊಂದಿಗೆ ಹೂವು ಅರ್ಪಿಸಿ ಭಾವುಕ ವಿದಾಯ ಹೇಳಿದರು. ದುಃಖತಪ್ತ ಸೇನಾಧಿಕಾರಿಗಳು, ಸೇನಾ ಸಿಬ್ಬಂದಿ ಮತ್ತು ಬಂಧುಮಿತ್ರರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ, ಗೀತಿಕಾ ಲಿಡ್ಡರ್, "ನಾನು ಸೈನಿಕನ ಪತ್ನಿಯಾಗಿ ಅವರನ್ನು ಮುಗುಳ್ನಗೆಯೊಂದಿಗೆ ಚೆನ್ನಾಗಿ ಕಳುಹಿಸಿಕೊಡಬೇಕು. ಆದರೆ, ಈ ರೀತಿ ಅವರು ವಾಪಸಾಗುತ್ತಾರೆ ಎಂದುಕೊಂಡಿರಲಿಲ್ಲ. ಇದು ತುಂಬಲಾರದ ನಷ್ಟ. ಏನು ಮಾಡುವುದು...ದೇವರಿಗೆ ಇದೇ ಒಪ್ಪಿಗೆ ಇತ್ತು" ಎಂದು ಭಾವುಕರಾಗಿ ನುಡಿದರು. "ಅವರು ತುಂಬಾ ಒಳ್ಳೆಯ ತಂದೆಯಾಗಿದ್ದರು. ನನ್ನ ಮಗಳು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾಳೆ" ಎಂದರು.
ಬ್ರಿ.ಲಿಡ್ಡರ್ರ ಜೀವನ: 1969ರ ಜೂನ್ 26 ರಂದು ಜನಿಸಿದ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, 1990ಕ್ಕೆ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ಗೆ ಸೇರಿ ಸೇವೆ ಆರಂಭಿಸಿದರು. ಕಾಂಗೋಗೆ ತೆರಳಿದ್ದ ಯುಎನ್ ಶಾಂತಿಪಡೆಯ ಬಟಾಲಿಯನ್ನ ಕಮ್ಯಾಂಡರ್ ಆಗಿದ್ದರು. ಭಾರತದ ಉತ್ತರ ಭಾಗದ ಗಡಿಗಳಲ್ಲಿ ಸೇನಾ ಬ್ರಿಗೇಡ್ಗಳನ್ನು ಕಮ್ಯಾಂಡ್ ಮಾಡಿದ್ದರು. ಮಿಲಿಟರಿ ಆಪರೇಷನ್ಸ್ ಡೈರೆಕ್ಟೊರೇಟ್ನ ನಿರ್ದೇಶಕರಾಗಿ ಮತ್ತು ಕಜಾಕಿಸ್ತಾನದಲ್ಲಿ ರಕ್ಷಣಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. 2021ರ ಜನವರಿಯಿಂದ ಸಿಡಿಎಸ್ ಜನರಲ್ ಬಿಪಿನ್ ರಾವತ್ರ ರಕ್ಷಣಾ ಸಹಾಯಕರಾಗಿ ಕರ್ತವ್ಯ ಪಾಲಿಸುತ್ತಿದ್ದರು. ಮೇಜರ್ ಜನರಲ್ನ ರಾಂಕ್ಗೆ ಅನುಮೋದನೆ ಪಡೆದಿದ್ದ ಬ್ರಿ.ಲಿಡ್ಡರ್, ಬದುಕಿದ್ದರೆ ಒಂದು ಡಿವಿಷನ್ನ ಜವಾಬ್ದಾರಿ ಪಡೆಯಬೇಕಿತ್ತು. (ಏಜೆನ್ಸೀಸ್)