ಮೃತ ವಿದ್ಯಾರ್ಥಿನಿಯರಿಗೆ ಕಣ್ಣೀರಿನ ವಿದಾಯ

klr mbl
ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ಮೃತ ಬಾಲಕಿ ಶ್ರಾವಂತಿ ಕುಟುಂಬದವರಿಗೆ ಸರ್ಕಾರದಿಂದ ಮಂಜುರಾಗಿದ್ದ 5 ಲಕ್ಷದ ಚೆಕ್​ಅನ್ನು ಜಿಲ್ಲಾಧಿಕಾರಿ ಅಕ್ರಂಪಾಷಾ ಸರ್ಕಾರದ ಪರವಾಗಿ ವಿತರಿಸಿ ಸಾಂತ್ವನ ಹೇಳಿದರು. ಎಸ್​ಪಿ ಬಿ. ನಿಖಿಲ್​ ಇದ್ದರು.
Published on

ಕೋಲಾರ/ಮುಳಬಾಗಿಲು: ತಾಲೂಕಿನ ಎಂ. ಕೊತ್ತೂರು (ಬಾಳಸಂದ್ರ) ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಮುರುಡೇಶ್ವರದ ಕಡಲಲ್ಲಿ ಮುಳುಗಿ ಮೃತಪಟ್ಟ ನಾಲ್ವರು ವಿದ್ಯಾರ್ಥಿನಿಯರ ಮೃತದೇಹಗಳನ್ನು ಗುರುವಾರ ಸ್ವಗ್ರಾಮಗಳಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು.

ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ಗ್ರಾಮಗಳಿಗೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಪಾಲಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ನೆರೆದಿದ್ದ ಸಾರ್ವಜನಿಕರ ಕಣ್ಣುಗಳು ಒದ್ದೆಯಾದವು.

ತಾಲೂಕಿನ ಪೂಜಾರಹಳ್ಳಿಯ ಗೋಪಾಲಪ್ಪ ಪುತ್ರಿ ಶ್ರಾವಂತಿ (15), ಹೆಬ್ಬಣಿ ಗ್ರಾಮದ ಚಿನ್ನರೆಡ್ಡೆಪ್ಪ ಪುತ್ರಿ ಲಾವಣ್ಯಾ (15), ಎನ್​.ಗಡೂರು ಗ್ರಾಮದ ಜಯರಾಮಪ್ಪ ಪುತ್ರಿ ದೀಕ್ಷಾ (15) ದೊಡ್ಡಗುಟ್ಟಹಳ್ಳಿ ಗ್ರಾಮದ ಮುನಿರಾಜು ಪುತ್ರಿ ವಂದನಾ (15 ) ಅವರ ಶವಗಳನ್ನು ಕುಟುಂಬದವರಿಗೆ ತಾಲೂಕು ಆಡಳಿತದಿಂದ ಹಸ್ತಾಂತರ ಮಾಡಿ ಗೌರವ ಸಲ್ಲಿಸಲಾಯಿತು.

ಶಾಸಕ ಕೊತ್ತೂರು ಮಂಜುನಾಥ್​ ನಾಲ್ವರು ವಿದ್ಯಾರ್ಥಿನಿಯರ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಜಿಲ್ಲಾಡಳಿತದಿಂದ ಅಂತಿಮ ದರ್ಶನ:

ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಗ್ಗೆ ಜಿಲ್ಲಾಧಿಕಾರಿ ಅಕ್ರಂಪಾಷಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಉಪ ವಿಭಾಗಾಧಿಕಾರಿ ಡಾ.ಎಚ್​.ಪಿ.ಎಸ್​. ಮೈತ್ರಿ, ಅಂಬೇಡ್ಕರ್​ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಪ್ರವಿಣ್​ ಬಾಗೇವಾಡಿ, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಗಳಾದ ಜಗದೀಶ್​, ರವಿಶಂಕರ್​, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್​, ತಹಸೀಲ್ದಾರ್​ ಡಾ.ನಯನಾ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಆಯಾ ಗ್ರಾಮಕ್ಕೆ ಮೃತದೇಹ ಕಳುಹಿಸಿಕೊಡಲಾಯಿತು.

ಚೆಕ್​ ಹಸ್ತಾಂತರ:

ಡಿಸಿ ಅಕ್ರಂಪಾಷಾ, ಎಸ್​ಪಿ ಬಿ.ನಿಖಿಲ್​ ಅವರು ಸರ್ಕಾರದಿಂದ ಮಂಜೂರಾಗಿರುವ 5 ಲಕ್ಷ ರೂ. ಚೆಕ್​ಗಳನ್ನು ಮೃತ ವಿದ್ಯಾರ್ಥಿನಿಯರ ಕುಟುಂಬಗಳ ಮುಖ್ಯಸ್ಥರಿಗೆ ವಿತರಿಸಿ ಸಾಂತ್ವನ ಹೇಳಿದರು. ಹಾಗೆಯೇ, ಸಮುದ್ರ ಅಲೆಗಳ ಸೆಳೆತಕ್ಕೆ ಸಿಕ್ಕಿ ಮುರುಡೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ತಾತಿಘಟ್ಟ ಗ್ರಾಮದ ಆಂಜಪ್ಪ ಪುತ್ರಿ ಯಶೋದಾ (15), ಬಾಳಸಂದ್ರ ಗ್ರಾಮ ನರಸಿಂಹ ಪುತ್ರಿ ವೀಕ್ಷಣಾ (15) ,ಕಲಿಕಿರಿ ಗ್ರಾಮದ ಮುನಿರಾಜು ಪುತ್ರಿ ಲಿಪಿಕಾ (15) ಗುರುವಾರ ಮನೆಗಳಿಗೆ ವಾಪಸ್​ ಆಗಿದ್ದು, ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಿಕ್ಷಕರು ಪೊಲೀಸರ ವಶಕ್ಕೆ

ಘಟನೆ ಸಂಬಂಧ ಪ್ರಾಂಶುಪಾಲರು ಮತ್ತು ಶಿಕ್ಷಕರ ಮೇಲೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಲೆಯಲ್ಲಿ ಈಗ ಸಮಾಜವಿಜ್ಞಾನ, ಹಿಂದಿಗೆ ಇಬ್ಬರು ಶಿಕ್ಷಕರು ಮಾತ್ರ ಇದ್ದು, ಶಾಲೆಯ ವಿದ್ಯಾರ್ಥಿಗಳೆಲ್ಲರೂ ಮನೆಗೆ ವಾಪಸ್​ ಆಗಿದ್ದಾರೆ. ತಾತ್ಕಾಲಿಕವಾಗಿ ಶಾಲೆಗೆ ಎರಡು ದಿನ ರಜಾ ಘೋಷಣೆ ಮಾಡಲಾಗಿದೆ.

ವಿದ್ಯಾಭ್ಯಾಸಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ

ಮಾರ್ಚ್​ ತಿಂಗಳಲ್ಲಿ 6 ರಿಂದ 9ನೇ ತರಗತಿ ಪರೀಕ್ಷೆಗಳು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್​ ಪರೀಕ್ಷೆ ಇದೆ. ವಸತಿ ಶಾಲೆಯಲ್ಲಿ ಕಾಯಂ ಶಿಕ್ಷಕರು, ನೇಮಕಾತಿ ಇಲ್ಲದೆ ಇರುವ ಅತಿಥಿ ಶಿಕ್ಷಕರೂ ಈಗ ಇಲ್ಲವಾಗಿದ್ದು, ವಿದ್ಯಾರ್ಥಿಗಳು ಪಾಠ ಪ್ರವಚನಗಳಿಲ್ಲದೆ ವಿದ್ಯಾಭ್ಯಾಸಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net