

ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಸರ್ಕಾರಗಳು ನಿರಂತರವಾಗಿ ಮಾತನಾಡಿಕೊಂಡು ಬರುತ್ತಿವೆ. ಸರ್ಕಾರ ಬದಲಾದಂತೆ ಒಂದೊಂದು ಕಾರ್ಯಕ್ರಮ ರೂಪುಗೊಳ್ಳುತ್ತವೆ. ಆದರೆ ಗುಣಮಟ್ಟ ಎಂಬುದು ಭರವಸೆಯಾಗಿಯೇ ಉಳಿದುಬಿಟ್ಟಿದೆ.
ಶಿಕ್ಷಕರ ನೇಮಕ, ಶಾಲಾ ಮೂಲಸೌಕರ್ಯಕ್ಕೆ ಸರ್ಕಾರಗಳು ಆದ್ಯತೆ ನೀಡದಿರುವುದು ವಿಪರ್ಯಾಸ. ಇದಕ್ಕೆ ತಾಜಾ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಬೇಕಾದ ಹಣ ಮೀಸಲಿಡುವ ಕೆಲಸ ಬಜೆಟ್ನಲ್ಲಿ ಆಗುತ್ತಿಲ್ಲ ಎಂಬುದು ವಾಸ್ತವ.
ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚುತ್ತಲೇ ಇದೆ. ಈ ಕೊರತೆ ನೀಗಿಸಲು ನಡೆಸಿದ ಯತ್ನಗಳು ಸಫಲವಾಗಿಲ್ಲ. ಇತ್ತೀಚಿನ ಒಂದು ಪ್ರಯತ್ನ ಎಂದರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೂಲಕ ಶಾಲಾ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಒಂದು ಶಾಲೆಗೆ ಕೇಂದ್ರೀಕರಿಸುವ ಮೂಲಕ ಗುಣಮಟ್ಟದ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಅಷ್ಟು ಸಲೀಸಲ್ಲ ಎಂಬುದು ಆಡಳಿತ ನಡೆಸುವವರಿಗೆ ಅರಿವಿಲ್ಲ ಎಂದೇನಿಲ್ಲ.
ಶಿಕ್ಷಕರ ಕೊರತೆಯ ವಿಚಾರಕ್ಕೆ ಬಂದರೆ ಸರಿಸುಮಾರು ಐದು ಸಾವಿರ ಶಿಕ್ಷಕರು ಈ ವರ್ಷ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರ ಸ್ಥಾನಕ್ಕೆ ಹೊಸದಾಗಿ ನೇಮಿಸಿಕೊಳ್ಳಲು ಪ್ರಯತ್ನ ಆರಂಭವಾಗಿದ್ದು, ಹಣಕಾಸು ಇಲಾಖೆ ಮುಂದೆ ಪ್ರಸ್ತಾವನೆ ಇಡಲಾಗಿದೆ. ವಾಸ್ತವವಾಗಿ ವರ್ಷದ ಹಿಂದೆಯೇ ಮುಂದಾಲೋಚನೆಯಿಂದ ಈ ಕೆಲಸ ಆಗಬೇಕಾಗಿತ್ತು. ಅಂತೂ ಈಗಲಾದರೂ ಪ್ರಯತ್ನ ಆರಂಭವಾಗಿದೆ ಎಂಬುದಷ್ಟೇ ಸಮಾಧಾನದ ವಿಚಾರ.
ಇಷ್ಟಾದರೆ ಸಾಲದು. ನೇಮಕ ಪ್ರಕ್ರಿಯೆ ಚುರುಕಾಗಿ ನಡೆಸಬೇಕು, ಕನಿಷ್ಠ ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಕಳೆದ ಬಾರಿ ಎದುರಾದ ಮೀಸಲು, ದಾಖಲಾತಿ ಗೊಂದಲದ ಸವಾಲುಗಳನ್ನು ಅರಿತು ಅಂತಹ ದೋಷ ಮತ್ತೆ ಮರುಕಳಿಸದಂತೆ ಸಚಿವರು, ಇಲಾಖಾ ಮುಖ್ಯಸ್ಥರು ಆರಂಭದಿಂದಲೇ ಗಮನ ಕೊಡುವುದು ಅತ್ಯಗತ್ಯ. ಅಲ್ಲದೆ, ನೇಮಕಾತಿ ಪ್ರಕ್ರಿಯೆ ಸುಲಭಗೊಳಿಸುವ ಅಗತ್ಯವೂ ಇದೆ. ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ನೇಮಕ ಸಂದರ್ಭದಲ್ಲಿ ಸ್ವಜನಪಕ್ಷಪಾತ, ಅಕ್ರಮ, ರಾಜಕೀಯ ನುಸುಳದಂತೆ ಎಚ್ಚರಿಕೆ ವಹಿಸಿದರೆ ಮಕ್ಕಳಿಗೆ ದೊಡ್ಡ ಕೊಡುಗೆ ಕೊಟ್ಟಂತೆ.
ರಾಜ್ಯದಲ್ಲಿ ಗೋವಿಂದೇಗೌಡರು ಶಿಕ್ಷಣ ಮಂತ್ರಿಯಾಗಿದ್ದ ಅವಧಿಯಲ್ಲಿ ಈವರೆಗಿನ ಗರಿಷ್ಠತಮ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿತ್ತು. ಅದನ್ನು ಇಂದಿಗೂ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು ನೆನಪಿಸಿಕೊಳ್ಳುತ್ತಾರೆ. ಅಂಥವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದಾಗ ಶಿಕ್ಷಣ ಕ್ಷೇತ್ರಕ್ಕೂ ಒಂದು ಕೊಡುಗೆ ಕೊಟ್ಟಂತೆ, ಮೈಲಿಗಲ್ಲು ಸ್ಥಾಪಿಸಿದಂತೆ.
ಶಿಕ್ಷಕರ ನೇಮಕಕ್ಕೆ ಇರುವ ನಿಯಮ, ಪರೀಕ್ಷೆಗಳು ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ. ಗುಣಮಟ್ಟದ ಶಿಕ್ಷಕರೇ ಲಭ್ಯರಾಗುತ್ತಾರೆ. ಸರ್ಕಾರ ಮನಸ್ಸು ಮಾಡಿ, ಒಂದು ಬಾರಿ ಶಿಕ್ಷಕರ ಕೊರತೆ ಇಲ್ಲದಂತೆ ಮಾಡುವ ಮತ್ತು ಪ್ರತಿ ವರ್ಷದ ಕೊರತೆಯನ್ನು ನೀಗಿಸಲು ಮುಂದಾಲೋಚನೆಯಾಗಿ ಪ್ರಕ್ರಿಯೆ ಆರಂಭಿಸಿದಾಗ ಸಹಜವಾಗಿ ಸರ್ಕಾರಿ ಶಾಲೆಯ ಶೈಕ್ಷಣಿಕ ಮಟ್ಟ ಉತ್ತಮವಾಗುತ್ತದೆ.