

ಕೊಪ್ಪ: ಶಿಕ್ಷಕರೇ ದೇಣಿಗೆ ಎತ್ತಿ, ಕೈಯಿಂದ ಕಾಸು ಹಾಕಿಕೊಂಡು 1991ರಲ್ಲಿ ನಿರ್ಮಾಣ ಮಾಡಿದ ಗುರುಭವನ ಪಾಳುಬಿದ್ದಂತಿದೆ. ಶಿಕ್ಷಕರ ಚುನಾವಣೆಯೊಂದು ನಡೆಯುವುದು ಬಿಟ್ಟರೇ ಬೇರೆ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳು ಇಲ್ಲಿ ನಡೆಯುತ್ತಿಲ್ಲ.
ಗುರುಭವನ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಲ್ಲಿ ಆಡಳಿತ ಮಂಡಳಿ ವಿಲವಾಗಿದೆ. ಹಿರಿಯ ಶಿಕ್ಷಕರು ಕಟ್ಟಿದ ಗುರುಭವನವನ್ನು ನಿರ್ಲಕ್ಷೃ ಮಾಡಿದ ಕಾರಣ ಮುರಿದ ಚೇರ್, ಬೆಂಚ್‌ಗಳನ್ನು ಹಾಕುವ ದಾಸ್ತಾನು ಕೊಠಡಿಯಂತೆ ಆಗಿದೆ.
ಗುರುಭವನದ ಸುತ್ತಮುತ್ತ ಗಿಡಗಂಟಿ ಬೆಳೆದು ಸಾರ್ವಜನಿಕರು ಅತ್ತ ಸುಳಿಯುತ್ತಿಲ್ಲ. ಗುರುಭವನದ ಶೌಚಗೃಹದಲ್ಲಿ ಶುಚಿತ್ವ ಇಲ್ಲ, ಮಳೆ ಬಂದರೆ ಮೇಲ್ಛಾವಣಿ ಸೋರಿ ಉಪಯೋಗಕ್ಕೆ ಬಾರದಂತೆ ಆಗಿದೆ. ನಿರ್ವಹಣೆ ಇಲ್ಲದ ಕಾರಣ ಶಿಕ್ಷಕರಿಗೂ ಸಹ ಗುರುಭವನದ ಬಗ್ಗೆ ಅಸಡ್ಡೆ ಮೂಡಿದೆ.
ಸರ್ಕಾರವೂ ಸಹ ಗುರುಭವನಕ್ಕೆ ಅನುದಾನ ನೀಡಿಲ್ಲ, ಇತ್ತ ಬಿಆರ್‌ಸಿ ಇನ್ನಿತರ ಕಚೇರಿಗಳಲ್ಲಿಯೇ ಶಿಕ್ಷಕರ ಸಭೆಗಳು ನಡೆಯುತ್ತಿವೆ. ಶಿಕ್ಷಕರ ದಿನಾಚರಣೆ ಇತ್ಯಾದಿ ಸಭೆ ಸಮಾರಂಭಗಳಿಗೆ ಶಿಕ್ಷಕರು ಪುರಭವನ ಹಾಗೂ ಬೇರೆ ಸಭಾಭವನ ಕಡೆ ಮುಖ ಮಾಡಿದ ಪರಿಣಾಮ ಗುರುಭವನ ಹೆಸರಿಗಷ್ಟೇ ಇದೆ.
ಗುರುಭವನವನ್ನು ಉಳಿಸಲು ಸರ್ಕಾರ, ಬಿಇಒ, ಶಿಕ್ಷಕರ ಸಂಘ ಹಾಗೂ ಶಿಕ್ಷಕರು ಮುಂದಾಗದಿದ್ದರೆ ಪಟ್ಟಣ ಮಧ್ಯಭಾಗದಲ್ಲಿ ಪಾಳು ಬಿದ್ದ ಕಟ್ಟಡವೊಂದು ಎದ್ದು ಕಾಣುತ್ತದೆ. ದಾನಿಗಳ ಸಹಕಾರ ಪಡೆದು ಗುರುಭವನ ಅಭಿವೃದ್ಧಿಗೆ ಮುಂದಾಗಬೇಕಿದೆ.
ಗುರುಭವನದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವಿಲ್ಲ. ಹೀಗಾಗಿ ದಾನಿಗಳ ಸಹಕಾರ ಪಡೆದು ಅಭಿವೃದ್ಧಿ ಮಾಡಬೇಕಿದೆ. ಮುಂದಿನ ದಿನದಲ್ಲಿ ಸಾರ್ವಜನಿಕರ ಸೇವೆಗೆ ಗುರುಭವನ ಲಭಿಸುವಂತೆ ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್.