

ಕೋಲಾರ: ಸಮಾಜವನ್ನೇ ತಿದ್ದುವ ಶಕ್ತಿ ಶಿಕ್ಷಕರಿಗಿದೆ, ಆದ್ದರಿಂದ ಜವಾಬ್ದಾರಿ ಅರಿತು ಸಮಾಜಕ್ಕೆ ಉತ್ತಮ ಸಾಧಕರನ್ನು ಸೃಷ್ಟಿ ಮಾಡಿ ಕೊಡಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ತಂದೆ, ತಾಯಿಯ ಮಾತೂ ಕೇಳದವನು ಶಿಕ್ಷಕರೊಬ್ಬರ ಮುಂದೆ ತಲೆ ತಗ್ಗಿಸುತ್ತಾನೆ ಎಂದರೆ ಈ ವೃತ್ತಿಗೆ ಇರುವ ಮಹಿಮೆ ಅಂಥದ್ದು.
ಜೀವನದಲ್ಲಿ ಏನು ಉಳಿಯುತ್ತೋ ಗೊತ್ತಿಲ್ಲ, ಆದರೆ ಗುರು ಕಲಿಸಿದ ವಿದ್ಯೆ ಮಾತ್ರ ಸಾಯುವವರೆಗೂ ನಮ್ಮೊಂದಿಗೆ ಇರುತ್ತದೆ. ವಿದ್ಯೆಗೆ ಸಾವಿಲ್ಲ, ಇಡೀ ದೇಶ ನೀವು ನೀಡುವ ಶಿಕ್ಷಣದ ಮೇಲೆ ಅವಲಂಬಿಸಿದೆ ಎಂಬ ಸತ್ಯ ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕಳೆದ ಒಂದು ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳ ಆಸ್ತಿ ದಾಖಲೆ ಮಾಡಿಸಲು ಕ್ರಮವಹಿಸಿದ್ದು, ಸರಿ ಸುಮಾರು ಎಲ್ಲ ಶಾಲೆಗಳಿಗೂ ಖಾತೆ, ಇ-ಸ್ವತ್ತು ಆಗಿದೆ. 7ನೇ ವೇತನ ಆಯೋಗ ಜಾರಿಗೆ ತರಲು ಸರ್ಕಾರ ಬದ್ಧವಾಗಿದ್ದು, ಶಿಕ್ಷಕರೊಟ್ಟಿಗೆ ಸಿದ್ದರಾಮಯ್ಯ ಅವರ ಸರ್ಕಾರ ಇದೆ ಎಂದರು.
ಗುರುಭವನ ಇಲ್ಲದಿರುವುದು ವಿಪರ್ಯಾಸ
ಜಿಲ್ಲಾ ಕೇಂದ್ರದಲ್ಲಿ ಗುರುಭವನ ಇಲ್ಲವಾಗಿರುವುದು ವಿಪರ್ಯಾಸ, ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲವೋ ಅಥವಾ ಇನ್ಯಾವ ಕಾರಣವೋ ಗೊತ್ತಿಲ್ಲ, ಒಟ್ಟಾರೆ ಭವನ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಮುಂದಿನವಾರವೇ ಡಿಸಿ ಕಚೇರಿಯಲ್ಲಿ ಸಭೆ ಕರೆದು ಕೂಡಲೇ ಭವನ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.
ನಗೆಪಾಟಲಿಗೀಡಾಗುವುದು ಬೇಡ
ಸರ್ಕಾರಿ ಶಾಲೆಗೆ ಬರುವುದು ಬಡವರ ಮಕ್ಕಳು. ಅವರನ್ನು ನಿಮ್ಮ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಪ್ರಜೆಗಳಾಗಿಸಿ, ಸಮಾಜದಲ್ಲಿ ಹೆಮ್ಮೆ ಎನಿಸಿರುವ ಶಿಕ್ಷಕ ವೃತ್ತಿಯ ಘನತೆ ಉಳಿಸಬೇಕು. ಗುರುಭವನ ನಿರ್ಮಾಣದ ವಿಷಯದಲ್ಲಿ ನಗೆಪಾಟಲಿಗೀಡಾಗುವುದು ಬೇಡ, ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಕಾಮಗಾರಿ ಮುಗಿಸೋಣ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.
ತಳಸಮುದಾಯದ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದ ಸಾವಿತ್ರಿ ಬಾಯಿ ಫುಲೆ ಸಹ ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ಕೊಡುಗೆ ನೀಡಿದ್ದಾರೆ. ತಂದೆ, ತಾಯಿ ನಂತರ ಗೌರವಕ್ಕೆ ಪಾತ್ರನಾಗುವನು ಗುರು. ಕಲ್ಲಿಗೆ ಮೂರ್ತಿ ರೂಪ ನೀಡುವ ಶಕ್ತಿ ಶಿಕ್ಷಕರಿಗಿದೆ ಎಂದರು.
ಜಿಲ್ಲಾಧಿಕಾರಿ ಅಕ್ರಂಪಾಷಾ ಮಾತನಾಡಿ, ಗುರಿವಿನ ವೃತ್ತಿ ಅತ್ಯಂತ ಪವಿತ್ರವಾದದ್ದು, ಸಮಾಜ ಕಟ್ಟುವ ನಿಮ್ಮ ಕೆಲಸ ಮುಂದುವರೆಸಿ, ದೇಶಕ್ಕೆ ಆಸ್ತಿಯಾಗುವ ಉತ್ತಮ ವಿದ್ಯಾರ್ಥಿಗಳನ್ನು ತಯಾರಿಸಿ ಎಂದು ತಿಳಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಲಾ 6 ಶಿಕ್ಷಕರಂತೆ 18 ಮಂದಿಗೆ 5 ಸಾವಿರ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಈ ಸಾಲಿನಲ್ಲಿ ನಿವೃತ್ತರಾದ ಎಲ್ಲ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಡಿಡಿಪಿಐ ಕೃಷ್ಣಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೌಪಾಲಗೌಡ, ಗ್ಯಾರಂಟಿ ಯೋಜನೆಗಳ ಪ್ರಾಽಕಾರದ ಅಧ್ಯಕ್ಷ ಶಿವಕುಮಾರ್, ಕೆಯುಡಿಎ ಅಧ್ಯಕ್ಷ ಮಹ್ಮದ್ ಹನೀಫ್, ಶಿಕ್ಷಣಾಧಿಕಾರಿಗಳಾದ ವೀಣಾ, ತಿಮ್ಮರಾಯಪ್ಪ, ಬಿಇಒ ಉಮಾದೇವಿ, ನೋಡಲ್ ಅಽಕಾರಿ ಶಂಕರೇಗೌಡ, ವಿಷಯ ಪರಿವೀಕ್ಷಕ ಸನಾವುಲ್ಲಾ ಇದ್ದರು.