

ಹಾವೇರಿ: ಇಲ್ಲಿಯ ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ನಗರದ ವೈಭವಲಕ್ಷ್ಮೀ ಉದ್ಯಾನದ ಕಚೇರಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶೋಭಾ ವಾಘ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಬಹಳ ಪವಿತ್ರವಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ಕಾಯಕ ನಾವು ಮಾಡುತ್ತಿದ್ದೇವೆ ಎಂಬ ಹೆಮ್ಮೆಯಿದೆ. ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘದವರು ಇನ್ನೂ ಹೆಚ್ಚಿನ ಸಾಮಾಜಿಕವಾಗಿ ಉತ್ತಮ ಕೆಲಸ ಮಾಡಲಿ ಎಂದರು.
ಸಂಘದ ಅಧ್ಯಕ್ಷೆ ಶಶಿರೇಖಾ ಮುಂಜೋಜಿ ಮಾತನಾಡಿ, ಸಂಘದ ಎಲ್ಲ ಮಹಿಳೆಯರು ಸಾಮಾಜಿಕ ಕೆಲಸ ಮಾಡಲು ಹೆಚ್ಚು ಉತ್ಸುಕವಾಗಿದ್ದು, ಸದಾ ಉತ್ತಮ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಾರೆ. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದರು.
ಸಂಘದ ಸದಸ್ಯೆಯರಾದ ಗಾಯತ್ರಿ ಜಾಧವ, ಸಂಜನಾ ಮೋರೆ, ಸುಧಾಬಾಯಿ ತಿಳವಳ್ಳಿ, ಅಶ್ವಿನಿ ಭೋಸ್ಲೆ, ಅನಿತಾ ಜಾಧವ, ಯಲ್ಲಮ್ಮ ತಿಳವಳ್ಳಿ, ಸುಮಿತ್ರಾ ಭೋಸ್ಲೆ, ಸುನಿತಾ ಮೋರೆ, ಪ್ರಭಾವತಿ ಗುಂಡೆ, ಗೀತಾಬಾಯಿ ಜೋಡಿಗೆ, ಸವಿತಾ ತಿಳವಳ್ಳಿ ಮತ್ತಿತರರು ಉಪಸ್ಥಿತರಿದ್ದರು.