ವಿದ್ಯಾರ್ಥಿನಿಯರ ಮೈ-ಕೈ ಮುಟ್ಟಿ ಅನುಚಿತ ವರ್ತನೆ: ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ

TMK teacher
Published on

ತುಮಕೂರು: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಕಾಮುಕ ಶಿಕ್ಷಕನ ರಂಗಿನಾಟ ಬಯಲಾಗಿದೆ. ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಶಿಕ್ಷಕನ ವಿರುದ್ಧ ರೊಚ್ಚಿಗೆದ್ದ ಪೋಷಕರು‌ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಆರೋಪ ಕೇಳಿಬರುತ್ತಿದ್ದಂತೆ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಮುಖ್ಯ ಶಿಕ್ಷಕ ನಟರಾಜ್​ರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೋರನಗುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

4 ಮತ್ತು 5ನೇ ತರಗತಿ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಶಾಲೆಯ ಕೊಠಡಿಯಲ್ಲೇ ಲೈಗಿಂಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಶಿಕ್ಷಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. ಬಳಿಕ ಶಿಕ್ಷಕನ ವಿರುದ್ಧ ತಿರುಗಿ ಬಿದ್ದ ಪೋಷಕರು ಹಾಗೂ ಗ್ರಾಮಸ್ಥರು‌ ಹಿರಿಯ ಅಧಿಕಾರಿಗಳಿಗೆ ದೂರು‌ ನೀಡಿದ್ದರು. ಇಷ್ಟೇ ಅಲ್ಲದೆ, ಕಾಮುಕ ಶಿಕ್ಷಕನನ್ನು ಬಂಧಿಸುವಂತೆ ಶಾಲೆಯ ಬಳಿ ಬಂದು ಪ್ರತಿಭಟನೆ ಸಹ ನಡೆಸಿದ್ದರು.

ಪ್ರತಿಭಟನೆಯ ನಡುವೆಯೇ ಕಾಮುಕ ಶಿಕ್ಷಕನ ಮೇಲೆ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ್ದರು. ಶಿಕ್ಷಕನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಧುಗಿರಿ ಬಿ.ಇ.ಒ. ತಿಮ್ಮರಾಜು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಮೇಲ್ನೋಟಕ್ಕೆ ಕಾಮುಕ ಶಿಕ್ಷಕ‌ ಮಂಜುನಾಥ್ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ಶಾಲೆಯ ಮುಖ್ಯ ಶಿಕ್ಷಕ ನಟರಾಜ್ ಕರ್ತವ್ಯ ಲೋಪ ಎಸಗಿರೋದು ಸಾಬೀತಾದ ಹಿನ್ನೆಲೆ ಇಬ್ಬರನ್ನು ಅಮಾನತು ಮಾಡಲಾಗಿದೆ.

ಘಟನೆ ಸಂಬಂಧ ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸರಿಂದ ಕಾಮುಕ ಶಿಕ್ಷಕ ಮಂಜುನಾಥ್ ಬಂಧನವಾಗಿದೆ. ಘಟನೆ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net