

ನವದೆಹಲಿ: ಮಕ್ಕಳು ಕಂಠಪಾಠ ಹೇಳದಿದ್ದರೆ, ಹೋಮ್ವರ್ಕ್ ಮಾಡಿಕೊಂಡು ಬರದಿದ್ದರೆ ಶಿಕ್ಷಕರು ಶಿಕ್ಷೆ ಕೊಡುವುದು ಹೊಸದೇನಲ್ಲ. ಅದರಲ್ಲೂ ಕೆಲವು ಕ್ರೂರವಾಗಿ ನಡೆದುಕೊಂಡು ಟೀಕೆಗೆ-ಆಕ್ರೋಶಕ್ಕೆ ಒಳಗಾದ ಪ್ರಕರಣಗಳೂ ಇವೆ. ಅಂಥದ್ದೇ ಇನ್ನೊಂದು ಪ್ರಕರಣ ಕಂಡುಬಂದಿದೆ.
ಇಲ್ಲಿ 9 ವರ್ಷದ ಬಾಲಕನೊಬ್ಬ ಗಣಿತದ ಸೂತ್ರವನ್ನು ಹೇಳಿಲ್ಲ ಎಂದು ಟೀಚರ್ ಆತನ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ದೌರ್ಜನ್ಯ ನಡೆಸಿದ ಘಟನೆಯೊಂದು ನಡೆದಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗೆ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಕಾನ್ಪುರದ ಪ್ರೇಮ್ನಗರದಲ್ಲಿ ಈ ಪ್ರಕರಣ ನಡೆದಿದ್ದು, ಸಂಬಂಧಪಟ್ಟ ಶಿಕ್ಷಣಾಧಿಕಾರಿಯಿಂದ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಸುಜಿತ್ಕುಮಾರ್ ಸಿಂಗ್ ಹೇಳಿದ್ದಾರೆ.
ಸಂಬಂಧಪಟ್ಟ ಶಿಕ್ಷಕರು ಶಾಲೆಯ ಲೈಬ್ರರಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯೊಂದರ ಪರಿಶೀಲನೆ ನಡೆಸುತ್ತಿರುವಾಗ ಈ ವಿದ್ಯಾರ್ಥಿ ಅಲ್ಲೇ ಹಾದುಹೋಗಿದ್ದನ್ನು ಗಮನಿಸಿ, ಕರೆದು ಗಣಿತದ ಟೇಬಲ್ ಹೇಳು ಎಂದಿದ್ದರು. ಆಗ ಹುಡುಗ ಹೇಳಲು ವಿಫಲನಾಗಿದ್ದಕ್ಕೆ ಈ ಶಿಕ್ಷಕರು ಅಲ್ಲೇ ಇದ್ದ ಡ್ರಿಲ್ಲಿಂಗ್ ಮಷಿನ್ ಆತನ ಕೈ ಮೇಲೆ ಇರಿಸಿ ಗಾಯಗೊಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು, ಶುಕ್ರವಾರ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಬಾಲಕನ ಪಾಲಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಶಿಕ್ಷಕರು ಆ ಬಳಿಕ ತಮ್ಮ ದುಷ್ಕೃತ್ಯದ ಬಗ್ಗೆ ಶಾಲೆಯ ಮೇಲಧಿಕಾರಿಗಳಿಗೆ ತಿಳಿಸಿಲ್ಲ ಮತ್ತು ಬಾಲಕನಿಗೆ ಚಿಕಿತ್ಸೆಯನ್ನೂ ಕೊಡಿಸಿಲ್ಲ. ಶಾಲೆಯವರು ಪ್ರಕರಣದ ತನಿಖೆಗೆ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.