ಬೋಧಕರ ವರ್ಗಾವಣೆ ಅಧಿಸೂಚನೆ ಗೊಂದಲ

ವಿಜಯವಾಣಿ-4-2
Published on

3 ವರ್ಷದಲ್ಲಿ ಶೇ.60 ಟ್ರಾನ್ಸ್​ಫರ್ | ತೀವ್ರ ವಿರೋಧ, ವಲಯವಾರು ವರ್ಗಕ್ಕೆ ಒತ್ತಡ

| ವಿಲಾಸ ಮೇಲಗಿರಿ. ಬೆಂಗಳೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೋಧಕರ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸುವ ಕುರಿತು ಅಧಿಸೂಚನೆ ಹೊರಡಿಸಿರುವುದು ಬೋಧಕರಲ್ಲಿ ತರಹೇವಾರಿ ಗೊಂದಲ ಉಂಟು ಮಾಡಿದೆ.

ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತರದಿರುವುದು, ವಲಯವಾರು ವರ್ಗಾವಣೆ ಅವಕಾಶ ನೀಡದಿರುವುದು, ಈಗಿರುವ ನಿಯಮದಲ್ಲಿ ಬೆಂಗಳೂರಿನವರಿಗೇ ಹೆಚ್ಚು ಅನುಕೂಲ, ಕ್ಲಸ್ಟರ್ ವಿ.ವಿ. ಆಪ್ಟ್ ಇನ್, ಆಪ್ಟ್ ಔಟ್ ಆಟ...ಹೀಗೆ ಇಡೀ ವರ್ಗಾವಣೆ ಅಧಿಸೂಚನೆಯೇ ಬೋಧಕರಲ್ಲಿ ಗಲಿಬಿಲಿಗೆ ಆಸ್ಪದ ಮಾಡಿಕೊಟ್ಟಿದೆ. 2021ರಲ್ಲಿ ವರ್ಗಾವಣೆ ಪ್ರಕ್ರಿಯೆಗೆ ತಿದ್ದುಪಡಿ ಮಾಡಲಾಗಿದೆ. ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೋಧಕರು ಬೇರೆ ವಲಯಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ನಗರದ ಇತರ ಕಾಲೇಜುಗಳಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸುವಂತೆಈ ರೀತಿಯ ಅವೈಜ್ಞಾನಿಕ ತಿದ್ದುಪಡಿ ತರಲಾಗಿದೆ.

ಪ್ರಾಧ್ಯಾಪಕರ ಮನವಿ ಪ್ರಯೋಜನಕ್ಕಿಲ್ಲ: ಕಾಲೇಜು ಜೇಷ್ಠತೆ ಬಿಟ್ಟು ವಲಯವಾರು ಜೇಷ್ಠತೆ ಪರಿಗಣಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರಸಕ್ತ ಸಾಲಿನ ಪಟ್ಟಿಯಲ್ಲಿ ಕಾಲೇಜುವಾರು ಜೇಷ್ಠತೆ ಪರಿಗಣಿಸಲಾಗಿದೆ. ಇದು ಬೆಂಗಳೂರಿನಲ್ಲಿಯೇ ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ವರ್ಗಾವಣೆಗೊಂಡಿರುವ ಬೋಧಕರ ಹಿತಕ್ಕೆ ಪೂರಕವಾಗಿದೆ.

ಮಹಾರಾಣಿ/ ನೃಪತುಂಗ ವಿವಿ ಬೋಧಕರ ಆಟ: ಮಹಾರಾಣಿ ಕ್ಲಸ್ಟರ್ ವಿ.ವಿ. ಮತ್ತು ನೃಪತುಂಗ ವಿ.ವಿ. ಬೋಧಕರು ಕೌನ್ಸೆಲಿಂಗ್​ನಲ್ಲಿ ತಮಗೆ ಬೇಕಾದ ಕಾಲೇಜು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಬಹುತೇಕರು ನಾವು ಆಪ್ಟ್ ಇನ್ ಆಗುತ್ತೇವೆ. ಇಲ್ಲಿಯೇ ಮುಂದುವರಿಯುತ್ತೇವೆ ಎಂದು ಹೇಳಿ ಅಲ್ಲೆ ಮುಂದುವರಿಯುತ್ತಾರೆ. ಹೀಗಾಗಿ ಅವರು ಆಯ್ಕೆ ಮಾಡಿಕೊಂಡ ಕಾಲೇಜಿನಲ್ಲಿ ಸಂಬಂಧಪಟ್ಟ ವಿಷಯದ ಹುದ್ದೆ ಬ್ಲಾಕ್ ಆಗಿರುತ್ತದೆ. ಇದರಿಂದ ಬೇರೆ ವಲಯದ ಬೋಧಕರು ಅಲ್ಲಿಗೆ ತೆರಳಲು ಸಾಧ್ಯವಾಗುವುದಿಲ್ಲ. ಇಲಾಖೆಯು ಈ ಬೋಧಕರು ಬೇರೆ ಕಾಲೇಜಿಗೆ ವರ್ಗಾವಣೆಯಾಗಿದ್ದಾರೆ ಎಂದೇ ಪರಿಗಣಿಸುತ್ತದೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ.

ವಿನಾಯಿತಿ ಎಂಬ ದ್ವಂದ್ವ ನೀತಿ: ಇಲಾಖೆಯಡಿ ಅನೇಕ ಕಾಲೇಜುಗಳಲ್ಲಿ (ಎನ್​ಸಿಸಿ) ವಿಂಗ್ ಇದೆ. ಬೇರೆ ಬೇರೆ ಕಾಲೇಜಿಗೆ ವರ್ಗಾವಣೆಯಾಗುವ ಎನ್​ಸಿಸಿ ಸಂಚಾಲಕರು ಅಲ್ಲಿ ಈ ವಿಂಗ್​ನ ಸಂಚಾಲಕರಾಗಿ ಕರ್ತವ್ಯನಿರ್ವಹಿಸಲು ಅವಕಾಶವಿದೆ. ಆದರೆ ಇಲಾಖೆ ಹೊಸ ನಿಯಮವೊಂದನ್ನು ಮಾಡಿ ಸಂಚಾಲಕರಿಗೆ ಮಾತ್ರ ವರ್ಗಾವಣೆ ಪ್ರಕ್ರಿಯೆಯಿಂದ ವಿನಾಯಿತಿ ನೀಡಿದೆ. ಆದರೆ ರೆಡ್ ಕ್ರಾಸ್, ಎನ್ನೆಸ್ಸೆಸ್, ಐಕ್ಯೂಎಸಿ, ಮ್ಯಾಗಜೀನ್, ಹಾಜರಾತಿ, ಪ್ಲೇಸ್​ವೆುಂಟ್, ಮಹಿಳಾ ಕೋಶ, ಲೈಬ್ರೆರಿ ಎಂಬ ಸಮಿತಿಗಳ ಸಂಚಾಲಕರಿಗೆ ಮಾತ್ರ ವಿನಾಯಿತಿ ಇಲ್ಲ! ಎಂಬ ವಾದವೂ ತಲೆ ಎತ್ತಿದೆ.

ಅಸ್ವಿತ್ವದಲ್ಲಿಯೇ ಇಲ್ಲದ ಸಂಘ!

ಕರ್ನಾಟಕ ರಾಜ್ಯ ಅಧ್ಯಾಪಕರ ಸಂಘದ ಪದಾಧಿಕಾರಿಗಳಿಗೆ ಬೆಂಗಳೂರಿನಲ್ಲಿಯೇ ಇರುವ ಅವಕಾಶವನ್ನು ಇಲಾಖೆ ನೀಡಿದೆ. ಒಂದೂವರೆ ವರ್ಷದಿಂದ ಸಂಘದ ಚುನಾವಣೆ ತಕರಾರು ಅರ್ಜಿ ಕೋರ್ಟ್​ನಲ್ಲಿರುವುದರಿಂದ ಸಂಘ ಅಸ್ಥಿತ್ವದಲ್ಲೇ ಇಲ್ಲ. ಆದರೂ ಪದಾಧಿಕಾರಿಗಳಿಗೆ ವರ್ಗಾವಣೆ ಪ್ರಕ್ರಿಯೆಯಿಂದ ವಿನಾಯಿತಿ ನೀಡಿರುವುದು ಸೂಕ್ತವಲ್ಲ ಎಂಬುದು ಕೆಲ ಪ್ರಾಧ್ಯಾಪಕರ ಅಭಿಪ್ರಾಯ.

ಕೌನ್ಸೆಲಿಂಗ್​ನಲ್ಲಿ ಹಲವು ವಲಯಗಳಿಗೆ ವಿನಾಯಿತಿ ನೀಡಿದೆ. ಅವುಗಳ ಬಗ್ಗೆ ತೀರ್ಮಾನ ಕಾಯ್ದಿರಿಸಲಾಗಿದೆ. ಮಹಾರಾಣಿ ಕ್ಲಸ್ಟರ್ ವಿ.ವಿ./ನೃಪತುಂಗ ವಿ.ವಿ. ಬೋಧಕರ ವರ್ಗಾವಣೆ ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು.

| ಜಿ.ಜಗದೀಶ್ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net