ಖಿನ್ನತೆಯಿಂದ ಬಳಲುತ್ತಿದ್ದ ಶಿಕ್ಷಕಿ ಆತ್ಮಹತ್ಯೆ

greatta
Published on

ಮಂಗಳೂರು: ನಗರದ ಖಾಸಗಿ ಶಾಲೆ ಶಿಕ್ಷಕಿ ಗ್ರೆಟ್ಟಾ ಗೊನ್ಸಾಲ್ವಿಸ್(53) ಬಿಕರ್ನಕಟ್ಟೆ ಸೌಜನ್ಯ ಲೇನ್‌ನಲ್ಲಿರುವ ತನ್ನ ಮನೆ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರೆಟ್ಟಾ ಅವರು ಪುತ್ರ ಮತ್ತು ಪುತ್ರಿಯ ಜತೆ ಬಿಕರ್ನಕಟ್ಟೆಯಲ್ಲಿ ವಾಸ್ತವ್ಯ ಮಾಡುತ್ತಿದ್ದು, ಅವರ ಪತಿ ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದು, ತಿಂಗಳಿಗೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಅವರು ನವೆಂಬರ್‌ನಲ್ಲಿ ಮಂಗಳೂರಿಗೆ ಬಂದು ಹೋಗಿದ್ದರು.

ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ಗ್ರೆಟ್ಟಾ ಅವರು ಮಕ್ಕಳ ಜತೆ ಮಲಗಿದ್ದರು. ಬುಧವಾರ ಬೆಳಗ್ಗೆ ಮಕ್ಕಳಿಗೆ ಎಚ್ಚರ ಆದಾಗ ತಾಯಿ ಪಕ್ಕದಲ್ಲಿ ಇರಲಿಲ್ಲ. ಮೇಜಿನ ಮೇಲೆ ಚೀಟಿಯೊಂದು ಸಿಕ್ಕಿದ್ದು, ಅದರಲ್ಲಿ ‘ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ನಾನು ಬದುಕುವುದಿಲ್ಲ’ ಎಂದು ಬರೆಯಲಾಗಿತ್ತು.

ಬಳಿಕ ಮಕ್ಕಳು ಹುಡುಕಾಡಿದಾಗ ಮನೆ ಆವರಣದ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡು ಬಂದಿತ್ತು. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net