

ಸನಾತನ ಧರ್ಮದ ಪ್ರಕಾರ ಪ್ರತಿ ಜೀವಿಯೂ ಬ್ರಹ್ಮವೇ ಅಥವಾ ಭಗವಂತನೇ. ಆದರೆ ಎಲ್ಲ ಜೀವಿಗಳ ಪೈಕಿ ಮಾನವನಿಗೆ ಮಾತ್ರ ಈ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆ. ಇದುವೇ ಮಾನವ ಜೀವನದ ಚರಮಗಮ್ಯವಾಗಿದೆ. ಮಾನವನಿಗೆ ಬ್ರಹ್ಮ ಸಾಕ್ಷಾತ್ಕಾರಕ್ಕೆ ಅಡ್ಡಿಯಾಗಿರುವುದು ಅವನ ಮನಸ್ಸೇ. ಮನಸ್ಸು ಮಾನವನಲ್ಲಿ ತಾನು ಬ್ರಹ್ಮನಿಗಿಂತ ಭಿನ್ನವೆಂಬ ಭ್ರಮೆಯನ್ನುಂಟು ಮಾಡುತ್ತದೆ. ಇದೇ ಅವನಲ್ಲಿ ದ್ವೈತಭಾವಕ್ಕೆ ಕಾರಣವಾಗಿದೆ. ಇದನ್ನೇ ಮಾಯೆಯೆಂದು ಕರೆಯುತ್ತಾರೆ. ಮನಸ್ಸು ಅಹಂಕಾರದ ರೂಪದಲ್ಲಿ ದೇಹಾತ್ಮಬುದ್ಧಿಗೆ ಕಾರಣವಾಗಿದೆ. ಈ ದೇಹಾತ್ಮಬುದ್ಧಿಯ ನೆಲೆಯಲ್ಲಿ ಮನಸ್ಸು ಚಿತ್ತದ ರೂಪವನ್ನು ತಳೆದು, ಜೀವಿಯ ಎಲ್ಲ ಸ್ಮರಣೆಗಳಿಗೆ ಕಾರಣವಾಗಿ ಸಂಸ್ಕಾರ ಹಾಗೂ ಪ್ರವೃತ್ತಿಗಳಿಂದ ಮಾನವನನ್ನು ಅಜ್ಞಾನದ ಬಂಧನಕ್ಕೆ ಗುರಿಮಾಡುತ್ತದೆ. ಇಂತಹ ಅಜ್ಞಾನವನ್ನು ತೊಡೆದು ಹಾಕಿ ತಾನು ಬ್ರಹ್ಮಸ್ವರೂಪನೇ ಎಂದು ಅರಿಯುವುದನ್ನು ಮೋಕ್ಷ ಅಥವಾ ಮುಕ್ತಿ ಎಂದು ಕರೆಯುತ್ತಾರೆ. ಮೋಕ್ಷವೆಂದರೆ ದೇಹಾತ್ಮಬುದ್ಧಿಯಿಂದ ಉಂಟಾದ ದೇಹದ ಕಡೆಗಿನ ಮೋಹದ ಕ್ಷಯವೇ ಆಗಿದೆ. ಈ ಅರ್ಥದಲ್ಲಿ ಮೋಕ್ಷವೆಂದರೆ ‘ಮೋಹಕ್ಷಯ’ ಎಂದು ಹೇಳುತ್ತಾರೆ.
ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಮಾನವನಿಗೆ ಗುರುವು ಅನಿವಾರ್ಯ. ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದ ವ್ಯಕ್ತಿ ಮಾತ್ರ ಗುರುವಾಗಲು ಸಾಧ್ಯ. ಇಂತಹ ಗುರುವನ್ನು ಪಡೆಯುವುದು ಹೇಗೆ? ಗುರುವಿನ ನಿಜ ಲಕ್ಷಣಗಳೇನು? ಗುರು ಹೇಗೆ ನಮಗೆ ಬ್ರಹ್ಮ ಸಾಕ್ಷಾತ್ಕಾರವನ್ನು ಮಾಡಿಸುತ್ತಾನೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.
ಬ್ರಹ್ಮ ಅಥವಾ ಭಗವಂತ ಅವತಾರ ರೂಪದಲ್ಲಿ ಬರುವ ಮುಖ್ಯ ಉದ್ದೇಶ, ಮಾನವರಲ್ಲಿ ತಮ್ಮ ದಿವ್ಯತ್ವದ ಅರಿವನ್ನು ಮೂಡಿಸಿ ಅವರು ದಿವ್ಯ ಸ್ವಭಾವಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಮಾಡಿ, ತನ್ಮೂಲಕ ಧರ್ಮಸ್ಥಾಪನೆ ಮಾಡುವುದಾಗಿದೆ. ಇಂತಹ ಅವತಾರದ ದರ್ಶನ- ಸ್ಪರ್ಶನ- ಸಂಭಾಷಣೆಗಳ ಭಾಗ್ಯವನ್ನು ಪಡೆದ ಹಲವರು, ಸಾಧನಾಸ್ಪೂರ್ತಿಯನ್ನು ಪಡೆದು ದೇಹಬಂಧನದ ಮಾಯೆಯಿಂದ ಮುಕ್ತರಾಗಿ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತಾರೆ. ಹೀಗೆ ಸತ್ಯ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿ, ಅದಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿ ಸಾಧನೆಯ ಮೂಲಕ ಬ್ರಹ್ಮಜ್ಞಾನದ ಸಿದ್ಧಿ ಪಡೆದವರನ್ನು ‘ದಿವ್ಯಪುರುಷ’ರೆಂದು ಕರೆಯುತ್ತಾರೆ. ಇಂತಹ ಗುರುಗಳು ಕರುಣಾಮೂರ್ತಿಗಳಾಗಿದ್ದು, ಇತರರಿಗೆ ಅಜ್ಞಾನದ ದುಃಖದಿಂದ ಪಾರಾಗಲು ಮಾರ್ಗದರ್ಶನ ಮಾಡಿ ಮುಕ್ತಿಯೆಡೆಗೆ ಕೊಂಡೊಯ್ಯುತ್ತಾರೆ. ‘ಗುರು’ ಎಂದರೆ ‘ಗು’+‘ರು’; ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಹೋಗಲಾಡಿಸುವವನು. ಗುರುವೆಂದರೆ ಅಜ್ಞಾನದ ಅಂಧಕಾರವನ್ನು ತೊಡೆದುಹಾಕುವವನು ಎಂದರ್ಥ. ಗುರು ತನ್ನ ಬೋಧನೆಗಳ ಮೂಲಕ ಜ್ಞಾನಪ್ರಕಾಶ ಬೀರಿ ಶಿಷ್ಯನ ಅಜ್ಞಾನಾಂಧಕಾರ ಕಳೆಯುತ್ತಾನೆ. ಇಂತಹ ಗುರುವಿನ ಸಾನ್ನಿಧ್ಯದಲ್ಲಿ ಶಿಷ್ಯನು ತನ್ನ ಸತ್ಯಸ್ವರೂಪವನ್ನು ತಿಳಿಯುತ್ತಾನೆ.
ಸತ್ಯದರ್ಶನ ಇಷ್ಟು ಸುಲಭವಾಗಿದ್ದರೆ ಏಕೆ ಎಲ್ಲರಿಗೂ ಮಾರ್ಗದರ್ಶನ ಮಾಡುವ ಗುರು ಲಭ್ಯವಾಗುವುದಿಲ್ಲ? ನಿಜವೇನೆಂದರೆ, ಜೀವನದಲ್ಲಿ ಗುರುವನ್ನು ಪಡೆಯಬೇಕಾಗಿದ್ದರೆ, ಮಾನವನು ಅದಕ್ಕೆ ಬೇಕಾದ ಅರ್ಹತೆ ಮೊದಲು ಸಂಪಾದಿಸಬೇಕು. ಇದರ ಅರ್ಥವೇನು? ಈ ಪ್ರಶ್ನೆಗಳಿಗೆ ಉತ್ತರ ಮುಂಡಕೋಪನಿಷತ್ತಿನಲ್ಲಿ ಸಿಗುತ್ತದೆ; ಯಾವುದೇ ವ್ಯಕ್ತಿ ಜೀವನದಲ್ಲಿ ಪ್ರಾಪಂಚಿಕವಾಗಿ ಎಲ್ಲವನ್ನೂ ಪಡೆಯಲು ಸಕಲ ಪ್ರಯತ್ನ ಮಾಡಿ, ತನ್ನ ಗಳಿಕೆಯಿಂದ ನಿಜವಾದ ಸಂತೋಷ ತನಗೆ ಲಭ್ಯವಾಗಿದೆಯೇ?- ಎಂಬ ವಿಶ್ಲೇಷಣೆ ಮಾಡಿದಾಗ ಅವನಿಗೆ ಸಿಕ್ಕುವ ಉತ್ತರ ನಕಾರವಾಗಿರುತ್ತದೆ. ಆಗ ಅಂತಹ ವ್ಯಕ್ತಿಗೆ ಪ್ರಾಪಂಚಿಕ ವಿಷಯಗಳಲ್ಲಿ ಭ್ರಮನಿರಸನವಾಗಿ, ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ನಿಜವಾದ ಆನಂದ ಎಲ್ಲಿದೆ?- ಎಂಬ ಜಿಜ್ಞಾಸೆ ಅವನಲ್ಲಿ ಪ್ರಾರಂಭವಾಗುತ್ತದೆ. ಅಂತಹ ನಿಜವಾದ ಆನಂದದ ಅನ್ವೇಷಣೆಯಲ್ಲಿ ಅವನು ಬ್ರಹ್ಮಜ್ಞಾನಿಯಾದ ಗುರುವನ್ನು ಅರಸುತ್ತಾನೆ. ಅಂತಹ ವ್ಯಕ್ತಿಗೆ ಗುರು ಸಿಕ್ಕಿಯೇ ಸಿಕ್ಕುತ್ತಾನೆ ಹಾಗೂ ಇವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ತನ್ನ ಬೋಧನೆ ಹಾಗೂ ತರಬೇತಿ ಮೂಲಕ ಮುಕ್ತಿಪಥದಲ್ಲಿ ಮುನ್ನಡೆಸುತ್ತಾನೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಮುಖ್ಯ ವಿಷಯವೆಂದರೆ, ಪ್ರಾಪಂಚಿಕ ಭೋಗ-ಭಾಗ್ಯಗಳ ತಾತ್ಕಾಲಿಕತೆಯನ್ನು ತಿಳಿದುಕೊಂಡು, ಈ ಪ್ರಪಂಚದಲ್ಲಿರುವ ಯಾವುದೇ ವಸ್ತುವಿಷಯಗಳು ಶಾಶ್ವತ ಆನಂದವನ್ನು ನೀಡುವುದಿಲ್ಲವೆಂಬ ಪರಿಜ್ಞಾನವೇ ಒಬ್ಬ ವ್ಯಕ್ತಿ ಗುರುವನ್ನು ಆಶ್ರಯಿಸಲು ಮೊದಲ ಕಾರಣ. ಈ ಅರ್ಥದಲ್ಲಿ ಲೌಕಿಕವಾದ ದುಃಖ, ಸೋಲು, ನಿರಾಶೆಗಳೇ ಆಧ್ಯಾತ್ಮಿಕ ಜೀವನದ ಪ್ರಥಮ ಸೋಪಾನಗಳೆಂದು ಹೇಳುತ್ತಾರೆ. ಇಂತಹ ಪರಿಜ್ಞಾನ ಒಬ್ಬ ವ್ಯಕ್ತಿಗೆ ತನ್ನ ಅನುಭವಗಳ ಆಧಾರದಲ್ಲಿ ಈ ಜನ್ಮದಲ್ಲಾದರೂ ಬರಬಹುದು ಅಥವಾ ಮುಂದಿನ ಯಾವುದೇ ಜನ್ಮದಲ್ಲಾದರೂ ಬರಬಹುದು. ಇಂತಹ ಪರಿಜ್ಞಾನವನ್ನು ಮುಮುಕ್ಷತ್ವವೆಂದು ಹೇಳುತ್ತಾರೆ; ಮುಮುಕ್ಷತ್ವವೆಂದರೆ ಮೋಕ್ಷವನ್ನು ಪಡೆಯಲು ಇರುವ ಪ್ರಬಲ ಆಕಾಂಕ್ಷೆ.
ಯಾವ ವ್ಯಕ್ತಿ ಪ್ರಾಪಂಚಿಕ ಅಭಿಲಾಷೆಗಳನ್ನು ಬಿಟ್ಟು, ಆಧ್ಯಾತ್ಮಿಕ ಉನ್ನತಿಗಾಗಿ ಹಂಬಲಿಸುತ್ತಾನೆಯೋ, ಅಂತಹ ಶ್ರದ್ಧಾವಂತನಿಗೆ ಗುರು ತಕ್ಷಣವೇ ಲಭ್ಯವಾಗುತ್ತಾನೆ. ಆದರೆ ಗುರು ಈ ವ್ಯಕ್ತಿಯನ್ನು ತಕ್ಷಣವೇ ಶಿಷ್ಯನನ್ನಾಗಿ ಸ್ವೀಕರಿಸದೇ ಇರಬಹುದು. ಮಾತ್ರವಲ್ಲದೆ ಅವನನ್ನು ಕೂಲಂಕಷವಾಗಿ ಪರೀಕ್ಷಿಸುತ್ತಾನೆ. ಶಿಷ್ಯನಲ್ಲಿ ತೀವ್ರವಾದ ಜ್ಞಾನದಾಹ ಹಾಗೂ ಸಂಪೂರ್ಣ ಶರಣಾಗತಿಯನ್ನು ಬಯಸುತ್ತಾನೆ. ಈ ವಿಷಯವನ್ನು ನಮಗೆ ಪ್ರಶ್ನೋಪನಿಷತ್ತು ಚೆನ್ನಾಗಿ ವಿವರಿಸುತ್ತದೆ. ತನ್ನ ಬಳಿ ವಿದ್ಯೆಯನ್ನು ಕಲಿಯಲು ಬಂದ ಆರು ಶಿಷ್ಯರಿಗೆ ಗುರುವಾದ ಪಿಪ್ಪಲಾದನು, ಅವರು ಕೇಳಿದ ಪ್ರಶ್ನೆಗಳಿಗೆ ಕೂಡಲೇ ಉತ್ತರಗಳನ್ನು ನೀಡುವುದಿಲ್ಲ. ಅದರ ಬದಲಿಗೆ ಅವರು ಒಂದು ವರ್ಷ ಕಾಲ ಶ್ರದ್ಧೆಯಿಂದ ತಪಸ್ಸು ಹಾಗೂ ಬ್ರಹ್ಮಚರ್ಯ ಪಾಲಿಸಲು ಆಜ್ಞಾಪಿಸುತ್ತಾನೆ. ಶ್ರದ್ಧೆಯೆಂದರೆ ಗುರುವಾಕ್ಯ ಹಾಗೂ ಶಾಸ್ತ್ರವಾಕ್ಯಗಳ ಮೇಲೆ ಸಂಪೂರ್ಣ ವಿಶ್ವಾಸ; ತಪಸ್ಸೆಂದರೆ ಪ್ರಾಪಂಚಿಕ ವಿಷಯಗಳಲ್ಲಿ ಮೋಹಾನುರಾಗಗಳನ್ನು ತೊರೆದು, ಸತ್ಯಸಾಕ್ಷಾತ್ಕಾರಕ್ಕಾಗಿ ತಪಿಸುವುದು; ಬ್ರಹ್ಮಚರ್ಯವೆಂದರೆ ಮನಸ್ಸನ್ನು ಇಂದ್ರಿಯಸುಖಭೋಗಗಳಿಂದ ದೂರವಿಟ್ಟು ಬ್ರಹ್ಮನಲ್ಲಿ ಚರಿಸುವಂತೆ ಮಾಡುವುದು. ಈ ರೀತಿಯಲ್ಲಿ ಆ ಆರು ಶಿಷ್ಯರು ಈ ನಿಯಮಗಳನ್ನು ಒಂದು ವರ್ಷ ನಿರಂತರವಾಗಿ ಪಾಲಿಸಿದ ನಂತರವೇ, ಗುರು ಪಿಪ್ಪಲಾದನು ಅವರಿಗೆ ಜ್ಞಾನಬೋಧನೆ ಮಾಡಿದ. ಯಾವ ರೀತಿಯಲ್ಲಿ ಶಿಷ್ಯನಿಗೆ ಕೆಲವು ಅರ್ಹತೆಗಳ ಅಗತ್ಯವಿದೆಯೋ, ಗುರುವಿಗೂ ಕೂಡ ಕೆಲವು ಅರ್ಹತೆಗಳಿರಬೇಕು. ಇಂತಹ ಎಂಟು ಗುರುಲಕ್ಷಣಗಳನ್ನು ಶ್ರೀ ಆದಿಶಂಕರಾಚಾರ್ಯರು ತಾವು ರಚಿಸಿರುವ ‘ವಿವೇಕಚೂಡಾಮಣಿ’ ಗ್ರಂಥದ ಒಂದು ಶ್ಲೋಕದಲ್ಲಿ ವಿವರಿಸಿದ್ದಾರೆ. ಅವುಗಳೆಂದರೆ:
1. ಶ್ರೋತ್ರಿಯಃ - ಶಾಸ್ತ್ರಗಳನ್ನು ತಿಳಿದವನು 2. ಅವೃಜಿನಃ- ಪಾಪ ರಹಿತನು 3. ಅಕಾಮಹತಃ-ಯಾವುದೇ ಪ್ರಾಪಂಚಿಕ ಆಸೆಗಳಿಲ್ಲದವನು 4. ಬ್ರಹ್ಮವಿತ್ತಮಃ -ಬ್ರಹ್ಮನನ್ನು ತಿಳಿದವನು 5. ಬ್ರಹ್ಮಣ್ಯುಪರತಃ - ಬ್ರಹ್ಮನಲ್ಲಿ ಸದಾ ನಿರತನಾಗಿರುವವನು 6. ಶಾಂತಃ ನಿರಿಂಧನಃ ಇವಾನಲಃ - ಎಲ್ಲ ಇಂಧನವನ್ನೂ ಕಬಳಿಸಿ ಶಾಂತವಾದ ಅಗ್ನಿಯಂತೆ ಇರುವವನು 7. ಅಹೇತುಕ ದಯಾಸಿಂಧುಃ - ಯಾವ ಕಾರಣವಿಲ್ಲದೆಯೇ ಇತರರ ಮೇಲೆ ಕರುಣೆಯನ್ನು ಹರಿಸುವವನು 8. ಬಂಧೂರನಮತಾಂ ಸತಾಂ- ತನಗೆ ಶರಣಾದವರಿಗೆ ನಿಜವಾದ ಬಂಧುವು
ಒಬ್ಬ ಶಿಷ್ಯನ ಮೇಲೆ ನಿಜವಾದ ಗುರುವಿನ ಅಹೇತುಕ ಕರುಣೆ ಹೇಗೆ ಹರಿಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಒಂದು ಸ್ವಾರಸ್ಯಕರ ಕಥೆಯಿದೆ. ಪರಮಜ್ಞಾನಿಯಾದ ಗುರು ರಿಭುವಿನ ಬಳಿಗೆ ಒಬ್ಬ ತಂದೆ ತನ್ನ ಮಗ ನಿದಾಘನನ್ನು ಕರೆದುಕೊಂಡು ಬಂದ. ಮಗನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ರಿಭುವಿನಲ್ಲಿ ಪ್ರಾರ್ಥಿಸಿದ. ರಿಭುವು ನಿದಾಘನನ್ನು ಆಶ್ರಮದಲ್ಲಿಟ್ಟುಕೊಂಡು ಪ್ರೀತಿಯಿಂದ ಬ್ರಹ್ಮಜ್ಞಾನ ಬೋಧಿಸಿದ. ಕೆಲವು ವರ್ಷಗಳಲ್ಲಿ ನಿದಾಘ ತಾರುಣ್ಯಾವಸ್ಥೆ ತಲುಪಿದ ಮೇಲೆ ಅವನನ್ನು ಪ್ರಾಪಂಚಿಕ ಆಶಾಮೋಹಗಳು ಆವರಿಸಿದವು. ಇದರಿಂದಾಗಿ ನಿದಾಘ ಗುರುವಿಗೆ ತಿಳಿಸದೆಯೇ ಆಶ್ರಮದಿಂದ ಓಡಿ ಹೋದ. ಎಲ್ಲೋ ಒಂದು ದೂರದ ಊರಿನಲ್ಲಿ ಸಂಸಾರವನ್ನು ಪ್ರವೇಶಿಸಿ ಲೌಕಿಕ ಸುಖ-ಭೋಗಗಳಲ್ಲಿ ಮುಳುಗಿಹೋದ. ಶಿಷ್ಯನು ಗುರುವನ್ನು ಬಿಟ್ಟರೂ, ಕರುಣಾಮಯನಾದ ಗುರು ಶಿಷ್ಯನನ್ನು ಬಿಡಲು ಸಿದ್ಧನಿಲ್ಲ. ಅನೇಕ ರೀತಿಗಳಲ್ಲಿ ಗುರು ಶಿಷ್ಯನನ್ನು ಉದ್ಧರಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಾನೆ. ಅಂತಹ ಸನ್ನಿವೇಶ ಇಲ್ಲಿ ವರ್ಣಿಸಲಾಗಿದೆ.
ನಿದಾಘನು ಗುರುವನ್ನು ಬಿಟ್ಟುಹೋದ ಹಲವು ವರ್ಷಗಳ ನಂತರ, ಗುರು ಒಬ್ಬ ಬಡ ಮುದುಕನ ಮಾರುವೇಷದಲ್ಲಿ ನಿದಾಘ ವಾಸವಾಗಿದ್ದ ಪಟ್ಟಣಕ್ಕೆ ಬಂದ. ಅಲ್ಲಿ ರಾಜನ ಮೆರವಣಿಗೆ ವೀಕ್ಷಿಸಲು ರಸ್ತೆ ಬದಿಯಲ್ಲಿ ನಿಂತಿದ್ದ ಗುಂಪಿನಲ್ಲಿ ತನ್ನ ಶಿಷ್ಯನನ್ನು ನೋಡಿ ಅವನ ಹತ್ತಿರ ಬಂದು ನಿಂತ. ರಿಭು ಏನೂ ತಿಳಿಯದವನಂತೆ ನಿದಾಘನನ್ನು, ‘ಅಲ್ಲಿ ಏನು ನಡೆಯುತ್ತಿದೆ?’ ಎಂದು ಕೇಳಿದ. ಅದಕ್ಕೆ ನಿದಾಘನು, ‘ರಾಜನ ಮೆರವಣಿಗೆ ಬರುತ್ತಿದೆ’ ಎಂದ. ‘ಮೆರವಣಿಗೆಯಲ್ಲಿ ರಾಜನು ಎಲ್ಲಿದ್ದಾನೆ?’ ಎಂದು ರಿಭು ಪುನಃ ಪ್ರಶ್ನಿಸಿದ. ನಿದಾಘನು ರಾಜನ ಕಡೆಗೆ ಬೆರಳು ತೋರಿಸಿ, ‘ಆ ಆನೆಯ ಮೇಲೆ ಕುಳಿತವನು’ ಎಂದ. ಆಗ ಗುರು, ‘ಆನೆ ಯಾವುದು?’ ಎಂದು ಕೇಳಿದ. ಆಗ ಸಿಟ್ಟಿನಿಂದ ನಿದಾಘ ಮೆರವಣಿಗೆಯ ಕಡೆ ಕೈತೋರಿಸಿ, ‘ಕೆಳಗಿರುವುದು ಆನೆ, ಅದರ ಮೇಲೆ ಕುಳಿತಿರುವವನು ರಾಜ’ ಎಂದ. ಆಗ ಗುರುವು ‘ಮೇಲೆ ಹಾಗೂ ಕೆಳಗೆ ಎಂದರೇನು?’ ಎಂದು ಪ್ರಶ್ನಿಸಿದ. ಕ್ರೋಧಗೊಂಡ ನಿದಾಘ ರಿಭುವಿನ ಹೆಗಲಿನ ಮೇಲೆ ಹತ್ತಿ ಕುಳಿತುಕೊಂಡು, ‘ನಾನು ಮೇಲೆ ಇದ್ದೇನೆ, ನೀನು ಕೆಳಗೆ ಇದ್ದೀಯೆ!’ ಎಂದ. ಗುರು ಇನ್ನೊಂದು ಪ್ರಶ್ನೆಯನ್ನು ಕೇಳಿದ, ‘ನಾನು’ ಹಾಗೂ ‘ನೀನು’ ಎಂದರೆ ಯಾರು? ಈ ಪ್ರಶ್ನೆಯ ಆಧ್ಯಾತ್ಮಿಕ ಅರ್ಥ ಗ್ರಹಿಸಿದ ನಿದಾಘನಿಗೆ ವೃದ್ಧನ ರೂಪದಲ್ಲಿ ಬಂದಿರುವುದು ತನ್ನ ಗುರುವೇ ಎಂದು ಗೊತ್ತಾಗುತ್ತದೆ. ಎಲ್ಲರಲ್ಲೂ ಇರುವ ದಿವ್ಯತ್ವ ಒಂದೇ ಆಗಿದ್ದು, ‘ನಾನು’, ‘ನೀನು’ ಎಂಬ ಭೇದಗಳೇ ಇಲ್ಲವೆಂಬ ಸತ್ಯವನ್ನು ಮರೆತುಹೋದ ತನಗೆ ಅದನ್ನು ಜ್ಞಾಪಿಸಲು ಗುರುವೇ ಸ್ವಯಂ ಈ ವೃದ್ಧನ ವೇಷದಲ್ಲಿ ಬಂದಿದ್ದಾನೆಂದು ನಿದಾಘನಿಗೆ ಅರಿವಾಗುತ್ತದೆ. ಹೀಗೆ ಆ ಶಿಷ್ಯನನ್ನು ಗುರು ಮತ್ತೆ ಆಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ.
ಆದ್ದರಿಂದಲೇ, ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ದೇವರಿಗೆ ಸಮವಾದವನೆಂದು ಆರಾಧಿಸುತ್ತಾರೆ; ಕೆಲವೊಮ್ಮೆ ಗುರು ದೇವರಿಗಿಂತಲೂ ಹೆಚ್ಚು ಎಂಬ ಭಕ್ತಿಯಿಂದ ಪೂಜಿಸುತ್ತಾರೆ. ಗುರುಬರ್Åಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ||
ಹೀಗೆ ಸಾಕ್ಷಾತ್ ಪರಬ್ರಹ್ಮನೇ ಆಗಿರುವ ಗುರುವಿಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಗುರುವಿನ ಶ್ರೀ ಚರಣಗಳಲ್ಲಿ ಶಿಷ್ಯ ಯಾವ ಪಾಠಗಳನ್ನು ಕಲಿಯುತ್ತಾನೆ? ಹೇಗೆ ಪವಿತ್ರವಾದ ಈ ಮನುಷ್ಯ ಜನ್ಮದಲ್ಲಿ ಮಾತ್ರ ಜನನ-ಮರಣ ಚಕ್ರದಿಂದ ಪಾರುಮಾಡುವ ಬ್ರಹ್ಮಜ್ಞಾನವನ್ನು ಪಡೆಯಲು ಸಾಧ್ಯ?- ಇವುಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.