ಶಿಕ್ಷಕರಾಗಲೂ ನಾನಾ ತೊಡಕು! ಪ್ರಮಾಣಪತ್ರದಲ್ಲಿ ನೋಂದಣಿ ಸಂಖ್ಯೆಯೇ ಇಲ್ಲದೆ ಸಮಸ್ಯೆ

cvbcvb
Published on

|ರಮೇಶ್ ಮೈಸೂರು, ಬೆಂಗಳೂರು

ಸಾರ್ವಜನಿಕ ಶಿಕ್ಷಣ ಇಲಾಖೆ ಸದ್ಯ 6-8ನೇ ತರಗತಿ ಬೋಧನೆಗೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆದರೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಲವರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲೂ ಕೆಎಸ್​ಒಯು ಪದವೀಧರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ಅರ್ಜಿ ಸಲ್ಲಿಕೆ ವೇಳೆ ಪದವಿ ಉತ್ತೀರ್ಣ ಪ್ರಮಾಣ ಪತ್ರ ಕಡ್ಡಾಯ ದಾಖಲೆಯಾಗಿದೆ. ಇದನ್ನು ಹೊಂದಿರುವವರು ನಿಗದಿತ ಆನ್​ಲೈನ್ ಅರ್ಜಿ ನಮೂನೆಯಲ್ಲಿ ಪ್ರಮಾಣಪತ್ರದ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಲಾಗಿದೆ. ಆದರೆ, ಕೆಎಸ್​ಒಯು ನೀಡಿರುವ ಪ್ರಮಾಣಪತ್ರದಲ್ಲಿ ನೋಂದಣಿ ಸಂಖ್ಯೆಯೇ ಇಲ್ಲ.

ಪದವಿ ಪ್ರಮಾಣಪತ್ರದ ಆಧಾರದಲ್ಲಿ ಬಿ.ಇಡಿ ವ್ಯಾಸಂಗ ಮಾಡಿದ್ದೇವೆ. ಅದನ್ನೇ ಆಧಾರವಾಗಿಸಿಕೊಂಡು ಟಿಇಟಿ ಪರೀಕ್ಷೆಯನ್ನು ಪಾಸು ಮಾಡಿ ಶಿಕ್ಷಕರ ನೇಮಕಾತಿಗೆ ಅರ್ಹತೆಯನ್ನು ಪಡೆದಿದ್ದೇವೆ. ಈಗ ಎದುರಾಗಿರುವ ಸಮಸ್ಯೆ ಯಿಂದಾಗಿ ನಿರ್ಣಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಿಂದಲೇ ಹೊರಗುಳಿಯುವ ಆತಂಕ ಎದುರಾಗಿದೆ ಎಂದು ಅಭ್ಯರ್ಥಿಗಳು ಕಳವಳ ಪಡುತ್ತಿದ್ದಾರೆ.

ಅಧಿಕಾರಿಗಳು ಹೇಳೋದೇನು?: ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಗಳನ್ನು ಪರಿಹರಿಸಲು ಹಾಗೂ ಅಭ್ಯರ್ಥಿಗಳಿಂದ ನಿಯಮಿತವಾಗಿ ಕೇಳಲಾಗುವ ಕೆಲ ಪ್ರಶ್ನೆಗಳ ಬಗ್ಗೆ ಪರೀಕ್ಷೆ ನಡೆಸುತ್ತಿರುವ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಕೆಲ ಸ್ಪಷ್ಟನೆಗಳನ್ನು ಬಿಡುಗಡೆ ಮಾಡಿದೆ. ಆದರೆ, ಇದರಲ್ಲೂ ಪದವಿ ಉತ್ತೀರ್ಣ ಪ್ರಮಾಣಪತ್ರದ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ತಿರಸ್ಕಾರಗೊಳ್ಳುವ ಹಾಗೂ ಉದ್ಯೋಗವಂಚಿತರಾಗುವ ಆತಂಕಕ್ಕೆ ಸಿಲುಕಿದ್ದಾರೆ.

ಕೆಎಸ್​ಒಯು ತಪ್ಪಾ?: ಸಮಸ್ಯೆಯ ಆಳ ಇರುವುದು ಕೆಎಸ್​ಒಯು ಮಾನ್ಯತೆ ಕಳೆದುಕೊಂಡಿದ್ದ ಅವಧಿಯದ್ದು. 2012ಕ್ಕೂ ಮೊದಲು, 2012-13ರಿಂದ 2015-16ರ ಅವಧಿಯಲ್ಲಿ ಕೆಲ ಕಾರಣಕ್ಕೆ ಯುಜಿಸಿ ಕೆಎಸ್​ಒಯು ಮಾನ್ಯತೆ ರದ್ದುಪಡಿಸಿತ್ತು. ಈ ಅವಧಿಯಲ್ಲಿ ಪಡೆಯಲಾದ ಪದವಿಗಳಿಗೆ ಮಾನ್ಯತೆ ಇಲ್ಲ ಎಂದು ಘೋಷಿಸಿತ್ತು. ಆದರೆ, ಈ ಪದವೀಧರರನ್ನು ಶೈಕ್ಷಣಿಕ ವ್ಯಾಸಂಗ, ನೇಮಕಾತಿಗೆ ಪರಿಗಣಿಸುವುದಾಗಿ ಸರ್ಕಾರ 2018ರಲ್ಲಿ ಆದೇಶ ಹೊರಡಿಸಿತು. ಹೀಗಾಗಿ ಪದವಿ ಉತ್ತೀರ್ಣ ಪ್ರಮಾಣಪತ್ರ ಪಡೆದರೂ ಅದರಲ್ಲಿ ಸಂಖ್ಯೆ ನಮೂದಿಸಿರಲಿಲ್ಲ ಎನ್ನುವುದು ಕೆಎಸ್​ಒಯು ಅಧಿಕಾರಿಗಳ ವಿವರಣೆ.

ಸಮಯ ಸಾಕಾಗದು: ಶಿಕ್ಷಕರ ನೇಮಕಾತಿ ಪರೀಕ್ಷೆ ಪ್ರಕ್ರಿಯೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಲು ಇಲಾಖೆ ವೇಳಾಪಟ್ಟಿ ಮಾಡಿಕೊಂಡಿದೆ. ಅರ್ಜಿ ಸಲ್ಲಿಕೆಗೆ ಇದೇ ತಿಂಗಳ 23 ಕೊನೇ ದಿನಾಂಕವಾಗಿದೆ. ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರಗಳನ್ನು ಮಾಡಿಸಲು ಅಭ್ಯರ್ಥಿಗಳು ತಾವು ಕಲಿತ ಶಾಲೆಗಳಿಗೆ ತೆರಳಿ ಪಡೆಯಬೇಕು. ಐದಾರು ಶಾಲೆಗಳಲ್ಲಿ ಕಲಿತಿದ್ದರೆ ವಾರಗಟ್ಟಲೇ ಓಡಾಡುವುದು ಅನಿವಾರ್ಯ. ಜತೆಗೆ, ಈ ಪ್ರಮಾಣಪತ್ರಗಳನ್ನು ಅಪ್​ಲೋಡ್ ಮಾಡಿದರೂ ತಂತ್ರಾಂಶದಲ್ಲಿ ನಮೂದಾಗುತ್ತಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಪರಿಹಾರವೇನು?: ಯುಜಿಸಿ ಮಾನ್ಯತೆ ರದ್ದು ಪಡಿಸಿದ ಅವಧಿಯಲ್ಲಿ ವಿವಿಯಲ್ಲಿ ನೇರವಾಗಿ ಪ್ರವೇಶ ಪಡೆದು ಉತ್ತೀರ್ಣರಾದವರು ಪ್ರಾವಿಷನಲ್ ಡಿಗ್ರಿ ಸರ್ಟಿಫಿಕೇಟ್ (ಪಿಡಿಸಿ) ಪಡೆದು ಅದರಲ್ಲಿ ನೀಡಲಾಗುವ ಸಂಖ್ಯೆ ನಮೂದಿಸಬಹುದು. ಆದರೆ, ಕೊಲಾಬರೇಟಿವ್ ಕಾಲೇಜುಗಳ ಮೂಲಕ ಪದವಿ ಪಡೆದಿದ್ದರೆ ಅಂಥವರಿಗೆ ಪಿಡಿಸಿಯೂ ಸಿಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net