

Cyber Fraud: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಹೆಚ್ಚಾಗಿದ್ದು, ಸೈಬರ್ ಅಪರಾಧಗಳು ಕ್ರಮೇಣವಾಗಿ ಏರಿಕೆಯಾಗುತ್ತಿವೆ. ಕೆಲಸ ಕೊಡಿಸುವ ನೆಪದಲ್ಲಿ, ಎಟಿಮ್ ಪಿನ್ ಸಂಖ್ಯೆ, ಬ್ಯಾಂಕ್ ಖಾತೆ ಪರಿಶೀಲನೆ ಸೇರಿದಂತೆ ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ, ಕೋಟಿ ಕೋಟಿ ಹಣವನ್ನು ಕ್ಷಣಮಾತ್ರದಲ್ಲಿ ಲಪಟಾಯಿಸುವ ಸೈಬರ್ ಕಳ್ಳರು, ಜನರಿಗೆ ಚಳ್ಳೆ ಹಣ್ಣು ತಿನಿಸುತ್ತಲೇ ಇದ್ದಾರೆ. ಪ್ರತಿದಿನ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದರೂ ಕೂಡ ಪದೇ ಪದೇ ಇಂತಹ ಜಾಲಕ್ಕೆ ಸಿಲುಕುವವರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇನು ಕಾಣಿಸುತ್ತಿಲ್ಲ.
ಕೇವಲ ಓಟಿಪಿ, ಪಿನ್ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸೇರಿದಂತೆ ಬ್ಯಾಂಕ್ಗೆ ಸಂಬಂಧಿಸಿದ ವಿಷಯವನ್ನು ಮಾತ್ರ ಕೇಳದ ಆನ್‌ಲೈನ್ ಕಳ್ಳರು, ಮನೆಯಲ್ಲೇ ಕುಳಿತು ಸಾವಿರಾರೂ ರೂಪಾಯಿ ಹಣವನ್ನು ಸಂಪಾದಿಸಬಹುದು ಎಂಬ ನಕಲಿ ಆ್ಯಡ್ಗಳನ್ನು ಪ್ರದರ್ಶಿಸುವ ಮುಖೇನ ತಮ್ಮ ವಂಚನೆ ಜಾಲಕ್ಕೆ ಜನರನ್ನು ಕೆಡವಿಕೊಳ್ಳುತ್ತಿರುವುದು ದುರಂತ. ಸದ್ಯ ಈ ಜಾಲಕ್ಕೆ ನಿವೃತ್ತ ಶಿಕ್ಷಕಿಯೊಬ್ಬರು ಸಿಲುಕಿದ್ದಾರೆ. ಮನೆಯಿಂದಲೇ ಕುಳಿತು ಕೆಲಸ ಮಾಡುವ ಜಾಹೀರಾತಿನ ಮೂಲಕ ಸೈಬರ್ ಖದೀಮರ ವಂಚನೆಗೆ ತುತ್ತಾದ ಮಹಿಳೆ, ಬರೋಬ್ಬರಿ 11 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆ ಮುಂಬೈನ ಗೋರೆಗಾಂವ್‌ನಲ್ಲಿ ಸಂಭವಿಸಿದೆ.
ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈ ಮಹಿಳೆ, ಕೆಲವು ತಿಂಗುಳಗಳ ಹಿಂದೆ ನಿವೃತ್ತಿ ಪಡೆದುಕೊಂಡಿದ್ದರು. ಆದಾಗ್ಯೂ, ಮನೆಯಲ್ಲಿ ಕೆಲಸವಿಲ್ಲದ ಕಾರಣ ತುಸು ಬೇಸರಗೊಂಡ ಹಿನ್ನೆಲೆ ಮನೆಯಿಂದಲೇ ಮಾಡುವ ಕೆಲಸಗಳ ಮೊರೆ ಹೋದ ಮಹಿಳೆ, ಜಾಲತಾಣದಲ್ಲಿ ಇದಕ್ಕಾಗಿ ಒಂದಷ್ಟು ತಡಕಾಡಿದ್ದಾರೆ. ಈ ವೇಳೆ ಶಿಕ್ಷಕಿ ಕಣ್ಣಿಗೆ ಬಿದ್ದ ವರ್ಕ್ ಫ್ರಂ ಹೋಮ್ ಜಾಹೀರಾತು ಆಕೆಯ ಗಮನವನ್ನು ಸಂಪೂರ್ಣವಾಗಿ ಸೆಳೆದಿದೆ. ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದ ಮಹಿಳೆ, ಮೊದಲಿಗೆ ಸಂತೋಷಪಟ್ಟರೂ ನಂತರದಲ್ಲಿ ಕಣ್ಣೀರಿಟ್ಟಿದ್ದಾರೆ.
ಕೆಲಸ ಬಗ್ಗೆ ಮಾಹಿತಿ ನೀಡಿದ ಆರೋಪಿ ವಿನಯ್, ಕೆಲಸ ಕೊಡಲು ಕೆಲವು ಪ್ರಕ್ರಿಯೆಗಳಿವೆ. ಅದನ್ನು ಮೊದಲು ಪೂರ್ಣಗೊಳಿಸೋಣ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪಿಕೊಂಡ ಆಕೆ, ಮೊದಲಿಗೆ ಕಳ್ಳನ ಮಾತಿನಂತೆ 50,000 ರೂ. ಹಣವನ್ನು ಮುಂಗಡ ಪಾವತಿಯಾಗಿ ನೀಡಿದ್ದಾಳೆ. ಇದಾದ ಕೆಲವೇ ನಿಮಿಷಗಳಲ್ಲಿ ಮಹಿಳೆಗೆ ಇನ್ನೊಂದು ಸಂಖ್ಯೆಯಿಂದ ಕರೆ ಬಂದಿದೆ. ನಿಮ್ಮ ಫೋನ್ ಸಂಖ್ಯೆ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದೆ. ಹೀಗಾಗಿ ತಕ್ಷಣವೇ ನಿಮ್ಮ ದೂರವಾಣಿ ನಂಬರ್ನ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾನೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬಂದಿದೆ. ನೀವು ಶಿಕ್ಷೆಗೆ ಗುರಿಯಾಗುತ್ತೀರಿ. ಈ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ನೀವು ಹಾಜರಾಗಬೇಕಾಗುತ್ತದೆ ಎಂದು ಮಹಿಳೆಯನ್ನು ನಿರಂತರವಾಗಿ ಬೆದರಿಸಿದ ಆರೋಪಿ, ದಿಢೀರ್ ಫೋನ್ ಕಟ್ ಮಾಡಿದ್ದಾನೆ. ಕೆಲವು ನಿಮಿಷಗಳ ಬಳಿಕ ಮಹಿಳೆಯ ಮೊಬೈಲ್ಗೆ ಹಣ ಕಡಿತಗೊಂಡ ಒಂದು ಸಂದೇಶ ಬಂದಿದೆ. ಅದರಲ್ಲಿ ಬರೋಬ್ಬರಿ 11 ಲಕ್ಷ ರೂ. ಕಟ್ ಆಗಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ.
ವಂಚಕರ ಕರಾಳ ಮುಖವನ್ನು ಕಡೆಗೂ ಅರಿತುಕೊಂಡ ಮಹಿಳೆ ತಕ್ಷಣವೇ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿ, ತನ್ನ ಅಳಲು ತೋಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು, ಆರೋಪಿಯ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).