

ಶನಿವಾರಸಂತೆ : ಮಕ್ಕಳಿಗೆ ಮೊದಲು ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮಕ್ಕಳಿಗೆ ಕಷ್ಟದ ಅರಿವಿರಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಬಿ.ಜಿ.ಜಯಂತಿ ಹೇಳಿದರು.
ಸಮೀಪದ ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಎಸ್‌ಡಿಎಂಸಿ ಸಮಿತಿ ಹಾಗೂ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸ್ಥರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ಪ್ರತಿಭೆಗಳು ಅಡಗಿದ್ದು, ಇವುಗಳನ್ನು ಅನಾವರಣಗೊಳಿಸಲು ವಾರ್ಷಿಕೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆ. ಮಕ್ಕಳು ಮೊಬೈಲ್‌ಗೆ ಅಂಟಿಕೊಂಡಿರಬಾರದು. ಇತ್ತೀಚಿನ ಮಕ್ಕಳನ್ನು ನೋಡಿದರೆ ಮುಂದೆ ನಮ್ಮ ದೇಶದ ಪರಿಸ್ಥಿತಿ ಯಾವ ಹಂತಕ್ಕೆ ತಲುಪುತ್ತದೆ ಎಂಬ ಆತಂಕ ಶುರುವಾಗಿದೆ. ಪಾಲಕರು ಮಕ್ಕಳಿಗೆ ಮೊಬೈಲ್ ಕೊಡುತ್ತಾರೆ, ನಂತರ ನಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದಿದ್ದಾರೆ ಎನ್ನುತ್ತಾರೆ. ಮೊದಲು ಪಾಲಕರು ಮೊದಲು ಬದಲಾಗಬೇಕು, ಇಲ್ಲವಾದರೆ ಮುಂದೆ ಸಂಕಷ್ಟಕ್ಕೆ ಸಿಲುಕಬಹುದು ಎಂದು ತಿಳಿಸಿದರು.
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಜಾನ್ ಪಾಲ್ ಡಿಸೋಜ ಮಾತನಾಡಿ, ಶಾಲೆ ಶಿಕ್ಷಣದ ದೇಗುಲವಾಗಿದ್ದು, ಇಲ್ಲಿ ಜಾತಿ, ಧರ್ಮ, ಮೇಲು ಕೀಳೆಂಬ ತಾರತಮ್ಯ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವ ದೇಗುಲವಾಗಿದೆ ಎಂದರು.
ಇಂದು ಪ್ರತಿಷ್ಠೆಯ ಹೆಸರಿನಲ್ಲಿ ಪಾಲಕರು ಸರ್ಕಾರಿ ಶಾಲೆಯ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ, ಈ ನಿಟ್ಟಿನಲ್ಲಿ ಪಾಲಕರು, ಸಾರ್ವಜನಿಕರು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಶಾಲೆಯಲ್ಲಿ ಇಂದು ಅನೇಕ ಸೌಲಭ್ಯಗಳಿವೆ. ಅದನ್ನು ನಾವು ಬಳಸಿಕೊಳ್ಳಬೇಕು, ನಾವು ನಮ್ಮ ಪ್ರತಿಷ್ಠೆಗಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ನಾವು ದುಡಿಯುವ ಹಣವನ್ನು ಆ ಶಾಲೆಗಳಿಗೆ ಸುರಿಯುತ್ತಿದ್ದೇವೆ. ಪಾಲಕರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ತೊಂದರೆಗೆ ಸಿಲುಕುವುದು ನಿಶ್ಚಿತ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಂ. ಎನ್. ಗೋಪಾಲ್, ಉಪನ್ಯಾಸಕ ಪ್ರಸನ್ನಕುಮಾರ್, ಆಲೂರು ಗ್ರಾಪಂ ಪಿ.ಎನ್.ಗಂಗಾಧರ್, ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರರ ಸಂಘದ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಆರ್.ಸುಂದರ್, ಹಿರಿಯ ಮುಖಂಡ ಮಾಚಯ್ಯ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವೇಂದ್ರ, ಆಲೂರು-ಸಿದ್ದಾಪುರ ಗ್ರಾ.ಪಂ. ಸದಸ್ಯೆ ಯಮುನಾ ಸುರೇಶ್, ಸದಸ್ಯೆ ಮುತ್ತಮ್ಮ, ಸದಸ್ಯ ಕಿರಣ್, ಶಾಲಾ ಮುಖ್ಯ ಶಿಕ್ಷಕಿ ಶೋಭಾ, ಸಹ ಶಿಕ್ಷಕ ವಿಶ್ವನಾಥ್, ಮಾಲಂಬಿ ಗ್ರಾಮದ ಅಧ್ಯಕ್ಷ ಎಚ್.ಸಿ.ದಿನೇಶ್, ಪ್ರಮುಖರಾದ, ಲೀಲಾ ದಾಸ್, ಅಕ್ಕಮ್ಮ, ಲಲಿತಾ ಜೋಯಪ್ಪ ಕೋಮರಪ್ಪ, ಅಶೋಕ್, ಜಾನಕಿ ಗಂಗಾಧರ್, ಲಿಂಗರಾಜು, ಲೋಕೇಶ್ ಎಚ್. ಜೆ, ಶಿಕ್ಷಕಿ ಪಿ.ಎಸ್.ರತ್ನಾ, ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥ್ , ಆಲೂರು ಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್ ಮುಂತಾದವರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಗೋಪಾಲ್, ನಿವೃತ್ತ ಮುಖ್ಯ ಶಿಕ್ಷಕಿ ಜಯಂತಿ ಬಿ. ಜಿ., ಶಿಕ್ಷಕ ಯಶವಂತ, ಮುಳ್ಳೂರು ಶಾಲಾ ಶಿಕ್ಷಕ ಜಾನ್ ಪಾಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಹಾಗೂ ಜೇನುಕಲ್ ಮೆಲೋಡಿಸ್ ಅವರಿಂದ ವಿವಿಧ ಸಾಂಸ್ಕೃತಿಕ ಕಲರವ ನಡೆಯಿತು.