

ಕೊಳ್ಳೇಗಾಲ: ಪಾಲಕರು ತಮ್ಮ ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರವನ್ನು ಕಲಿಸುವುದು ಅತ್ಯಗತ್ಯ ಎಂದು ಬೆಟ್ಟದಪುರದ ಸಲಿಲಾಖ್ಯ ಮಠ ಹಾಗೂ ಕೊಡಗಿನ ಕನ್ನಡ ಮಠದ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕುಂತೂರು ಗ್ರಾಮದಲ್ಲಿರುವ ಶ್ರೀ ವೀರ ಸಿಂಹಾಸನ ಮಠದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಶ್ರೀ ಮಹದೇಶ್ವರರ ಜಯಂತಿ, ಶ್ರಾವಣ ಮಾಸದ ಪೂಜಾನುಷ್ಠಾನ, ಹಿರಿಯ ಶ್ರೀಗಳ ಗುರು ಸ್ಮರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಾಲಕರು ಇಂದು ಸಮಾಜಕ್ಕೆ ಎಂತಹ ಮಕ್ಕಳನ್ನು ಕೊಡುಗೆಯಾಗಿ ನೀಡಬೇಕು ಎಂಬುದನ್ನು ಯೋಚಿಸಬೇಕಿದೆ. ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಆದರ್ಶ ಜೀವನವನ್ನು ಕಲಿಸಿದರೆ ಅವರು ದೇಶದ ಸತ್ಪ್ರಜೆಗಳಾಗಲಿದ್ದಾರೆ. ಸಾಧು-ಸಂತರು ಪೂರ್ವಾಶ್ರಮದಲ್ಲಿ ಗೃಹಸ್ಥಾಶ್ರಮದಿಂದಲೇ ಬಂದವರಾಗಿದ್ದಾರೆ. ಗೃಹಸ್ಥಾಶ್ರಮ ಶ್ರೇಷ್ಠ ಎಂದು ಶರಣರೇ ಸಾರಿದ್ದಾರೆ ಎಂದರು.
ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಮಹದೇಶ್ವರರ ಬಾಲ್ಯ ಜೀವನದಿಂದ ಹಿಡಿದು ಅವರು ಐಕ್ಯರಾಗುವವರೆಗೂ ಇರುವ ಮಹದೇಶ್ವರರ ಜೀವನ ವೃತ್ತಾಂತವನ್ನು ವಿವರಿಸಿದರು.
ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಶರಣು ವಿಶ್ವ ವಚನ ಫೌಂಡೇಷನ್‌ನ ಸಹ ಸಂಸ್ಥಾಪಕಿ ರೂಪಾ ವಚನ ಕುಮಾರಸ್ವಾಮಿ ಅವರು ಮಾತನಾಡಿದರು. ಕುಂತೂರು ವೀರ ಸಿಂಹಾಸನ ಮಠ ಅಧ್ಯಕ್ಷ ಶ್ರೀ ಶಿವಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಚನ ಕುಮಾರಸ್ವಾಮಿ, ರೂಪಾ ವಚನ ಕುಮಾರಸ್ವಾಮಿ, ದೊಡ್ಡನಹುಂಡಿ ರಾಜಣ್ಣ ಹಾಗೂ ಮಹೇಂದ್ರ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು, ಗ್ರಾಮದ ಮುಖಂಡರಾದ ನಾಗರಾಜಪ್ಪ, ಮಲ್ಲಪ್ಪ, ರಾಜಪ್ಪ, ಪ್ರಭು, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ವಿನೋದ್‌ಕುಮಾರ್, ಜಯಶಂಕರ್, ಲಿಂಗಣ್ಣ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.