

ನವದೆಹಲಿ: ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯದಿಂದ ಒಂದು ಹಣಕಾಸು ವರ್ಷದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ರೂಪದಲ್ಲಿ 25,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಕಡಿತವಾದರೆ, ಅಂಥವರು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವುದು ಕಡ್ಡಾಯ ಎಂದು ತೆರಿಗೆ ಪರಿಣತರು ಹೇಳಿದ್ದಾರೆ. ಹಿರಿಯ ನಾಗರಿಕರಾದರೆ ಅಂಥವರ ವಾರ್ಷಿಕ ಆದಾಯದಲ್ಲಿ 50,000 ರೂಪಾಯಿಗಿಂತ ಹೆಚ್ಚು ಟಿಡಿಎಸ್/ಟಿಸಿಎಸ್ ಕಡಿತವಾದರೆ ಅವರು ಕೂಡ ಐಟಿಆರ್ ಸಲ್ಲಿಸುವುದು ಅವಶ್ಯ.
ವ್ಯಕ್ತಿಯ ಆದಾಯ ತೆರಿಗೆ ಮಿತಿಯಲ್ಲಿ ಬಾರದೇ ಇದ್ದರೂ ಕೂಡ ಐಟಿಆರ್ ಸಲ್ಲಿಕೆ ಅವಶ್ಯ ಮಾಡಬೇಕು. ಇದೇ ರೀತಿ, ವ್ಯಕ್ತಿಯೊಬ್ಬ ತನ್ನ ಉಳಿತಾಯ ಬ್ಯಾಂಕ್ ಖಾತೆಯಲ್ಲಿ 50 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಿದರೆ ಆಗಲೂ ಅಂಥವರು ಕಡ್ಡಾಯವಾಗಿ ಐಟಿಆರ್ ಸಲ್ಲಿಸಬೇಕು. ಹಣಕಾಸು ಕಾಯ್ದೆ 2019ರ ಸೆಕ್ಷನ್ 139ರ ಏಳನೇ ಅಂಶದಲ್ಲಿ ಇದು ಉಲ್ಲೇಖವಾಗಿದೆ. ತೆರಿಗೆ ವಿನಾಯಿತಿಗೆ ಇರುವ ಮೂಲ ಆದಾಯ ಮಿತಿ ಮೀರಿದರೆ ಯಾವ ರೀತಿ ಮಾನದಂಡ ಎಂಬ ಅಂಶವೂ ಇದೆ.
ಇದರಂತೆ, ಚಾಲ್ತಿ ಖಾತೆಯಲ್ಲಿ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು, ವಿದೇಶಿ ಪ್ರವಾಸಕ್ಕೆ 2 ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು, ವಿದ್ಯುತ್ ಬಳಕೆ ಬಿಲ್ 1 ಲಕ್ಷ ರೂಪಾಯಿ ಮೀರಿದರೆ ಅಂತಹ ಸಂದರ್ಭದಲ್ಲಿ ಐಟಿಆರ್ ಸಲ್ಲಿಕೆ ಅಗತ್ಯವಾಗಿ ಮಾಡಬೇಕು ಎಂದು ಪರಿಣತರು ಹೇಳಿದ್ದಾರೆ.