

ನವದೆಹಲಿ: ಆದಾಯ ತೆರಿಗೆ ಮಸೂದೆಯನ್ನು ಪರಿಶೀಲಿಸಿ (2025), ಆದಾಯ ತೆರಿಗೆ ಕಾಯ್ದೆ 1961 ಅನ್ನು ಬದಲಿಸಲು ಸಂಸದೀಯ ಸಮಿತಿಯು ಕೆಲವು ಪ್ರಮುಖ ಬದಲಾವಣೆಗಳನ್ನು ಸೂಚಿಸಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಸೋಮವಾರ ಲೋಕಸಭೆಯಲ್ಲಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡಿಸಿದರು. ಹೊಸ ‘ಆದಾಯ ತೆರಿಗೆ ಮಸೂದೆ-2025’, ಆರು ದಶಕಗಳಷ್ಟು ಹಳೆಯದಾಗಿರುವ ‘ಆದಾಯ ತೆರಿಗೆ ಕಾಯ್ದೆ ಎ-1961’ರ ಬದಲಿಗೆ ಜಾರಿಗೆ ಬರಲಿದೆ.
ಆದಾಯ ತೆರಿಗೆ ರಿಟರ್ನ್ಗಳನ್ನು ಕಾಲಮಿತಿಯ ನಂತರ ಸಲ್ಲಿಸಿದರೂ ವೈಯಕ್ತಿಕ ತೆರಿಗೆದಾರರಿಗೆ ಟಿಡಿಎಸ್ (ಮೂಲದಲ್ಲಿ ಕಡಿತಗೊಂಡ ತೆರಿಗೆ) ಮರುಪಾವತಿಯನ್ನು ದಂಡವಿಲ್ಲದೆ ಪಡೆಯಲು ಅನುಮತಿಸಬೇಕು ಎಂದು ವರದಿ ಶಿಫಾರಸ್ಸು ಮಾಡಿದೆ. ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಆದಾಯ ಹೊಂದಿರುವ ತೆರಿಗೆದಾರರಿಗೆ ಟಿಡಿಎಸ್ ಕಡಿತಗೊಂಡಿದ್ದರೂ, ರಿಟರ್ನ್ ಸಲ್ಲಿಸದಿದ್ದರೆ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ, ಕಾಲಮಿತಿಯ ಒಳಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯ ನಿಬಂಧನೆಯನ್ನು ತೆಗೆದುಹಾಕಲು ಸಮಿತಿ ಸೂಚಿಸಿದೆ.
ಟ್ರಸ್ಟ್ಗಳ ತೆರಿಗೆ: ಧಾರ್ವಿುಕ ಮತ್ತು ದತ್ತಿ ಉದ್ದೇಶಗಳನ್ನು ಒಳಗೊಂಡ ಟ್ರಸ್ಟ್ಗಳಿಗೆ ಅನಾಮಧೇಯ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಸಲಹೆಯನ್ನು ಸಮಿತಿ ನೀಡಿದೆ. 2025ರ ಮಸೂದೆಯು ಎಲ್ಲ ನೋಂದಾಯಿತ ಲಾಭರಹಿತ ಸಂಸ್ಥೆಗಳ (ಎನ್ಪಿಒ) ಅನಾಮಧೇಯ ದೇಣಿಗೆಗಳಿಗೆ 30% ತೆರಿಗೆ ವಿಧಿಸುತ್ತದೆ, ಆದರೆ ಧಾರ್ವಿುಕ ಉದ್ದೇಶದ ಟ್ರಸ್ಟ್ ಗಳಿಗೆ ಮಾತ್ರ ಸೀಮಿತ ವಿನಾಯಿತಿ ನೀಡುತ್ತದೆ. ಇದು ಧಾರ್ವಿುಕ ಮತ್ತು ದತ್ತಿ ಉದ್ದೇಶಗಳನ್ನು ಒಳಗೊಂಡ ಟ್ರಸ್ಟ್ ಗಳಿಗೆ ಸಮಸ್ಯೆಯನ್ನುಂಟುಮಾಡಬಹುದು, ಏಕೆಂದರೆ ದೇಣಿಗೆ ಪೆಟ್ಟಿಗೆಗಳಂತಹ ಸಾಂಪ್ರದಾಯಿಕ ವಿಧಾನಗಳಿಂದ ಬಂದ ದೇಣಿಗೆಗಳ ದಾನಿಗಳನ್ನು ಗುರುತಿಸುವುದು ಕಷ್ಟ.
ಹಾಗಾಗಿ, 1961ರ ಕಾಯ್ದೆಯಂತೆ ವಿನಾಯಿತಿಯನ್ನು ಮರುಸ್ಥಾಪಿಸಲು ಸಮಿತಿಯು ಸಲಹೆ ನೀಡಿದೆ. ಸಂಸತ್ತಿನ ಪರಿಶೀಲನಾ ಸಮಿತಿ ನೀಡಿರುವ ಶಿಫಾರಸುಗಳು ಸಲಹಾ ಸ್ವರೂಪದ್ದಾಗಿರುತ್ತವೆ. ಈ ಶಿಫಾರಸುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಇರುತ್ತದೆ.