

ಆಂಧ್ರಪ್ರದೇಶ: ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಅಡ್ಡಂಕಿಯಲ್ಲಿ ಸಾರ್ವಜನಿಕ ಸಭೆಗೆ ಜನರು ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಮದ್ಯ ವಿತರಿಸಲಾಗಿದೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದ್ದು, ಭಾನುವಾರ ವೀಡಿಯೊವನ್ನು ಸಹ ಹಂಚಿಕೊಂಡಿದೆ.
ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಬಸ್ಸಿನೊಳಗೆ ಅನೇಕ ಪುರುಷರು ಕುಳಿತು, ಮದ್ಯಪಾನ ಮಾಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಅವರಲ್ಲಿ ಹಲವರು ಬಾಟಲಿಗಳಿಂದ ಮದ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ. ಟಿಡಿಪಿ ಈ ವಿಡಿಯೋವನ್ನು ಎಕ್ಸ್‌ನಲ್ಲಿ (ಈ ಹಿಂದೆ ಟ್ವಿಟರ್) ಹಂಚಿಕೊಂಡು, ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಗುಡುಗಿದೆ.
ಜಗನ್ ಮೋಹನ್ ರೆಡ್ಡಿ ಅವರ ಸಾರ್ವಜನಿಕ ಸಭೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲಿ ಎಂದು ಮದ್ಯವನ್ನು ನೀಡಿದ್ದಾರೆ. ಮದ್ಯ ನೀಡದಿದ್ದರೆ ಜನರು ಭಾಗವಹಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ), 'ಸಿದ್ಧಮ್' (ಸಿದ್ಧ) ಎಂಬ ಹೆಸರಿನ ಸಾರ್ವಜನಿಕ ಸಭೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ತಿಳಿಸಿದೆ.
"ಸಭೆಯಲ್ಲಿ ಕಡಿಮೆ ಹಾಜರಾತಿಯನ್ನು ಮರೆಮಾಚಲು ಈ ರೀತಿ ಮಾಡಲಾಗಿದೆ" ಎಂದ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, "ಜನರ ಕೊರತೆಯಿಂದಾಗಿ ಸಾರ್ವಜನಿಕ ಸಭೆಯು ಒಂದೂವರೆ ಗಂಟೆಗಳ ಕಾಲ ವಿಳಂಬವಾಯಿತು. ಜನಸಂದಣಿ ಕ್ಷಿಣಿಸುವ ಮೂಲಕ ಜಗನ್ ರೆಡ್ಡಿ ಯುಗ ಅಂತ್ಯಗೊಳ್ಳುತ್ತಿದೆ ಎಂಬುದು ಇದರ ಸಂಕೇತ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವೈಎಸ್‌ಆರ್‌ಸಿಪಿ, ಸಭೆಯ ಸ್ಥಳದ ಹೊರಗೆ ನೆರೆದಿದ್ದ ಜನಸಮೂಹದ ವೀಡಿಯೊವನ್ನು ಹಂಚಿಕೊಂಡಿದ್ದು, ಟಿಡಿಪಿ ನಾಯಕನನ್ನು 'ಪಪ್ಪು' ಎಂದು ಗೇಲಿ ಮಾಡಿತು. ಗ್ರಾಫಿಕ್ಸ್ ಅಥವಾ ಗ್ರೀನ್ ಮ್ಯಾಟ್‌ಗಳನ್ನು ಬಳಸುವಂತಹ 'ಗಿಮಿಕ್‌ಗಳಲ್ಲಿ' ನಾವು ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮುಖೇನ ನಾರಾ ಲೋಕೇಶ್ ಹೇಳಿಕೆಗೆ ತಿರುಗೇಟು ನೀಡಿದೆ,(ಏಜೆನ್ಸೀಸ್).