ಟಿಸಿಎಸ್​, ಟಾಟಾ ಮೋಟರ್ಸ್​, ಸನ್​ ಫಾರ್ಮಾ ಷೇರು ಖರೀದಿ ಜೋರು: 305 ಅಂಕಗಳ ಏರಿಕೆಯೊಂದಿಗೆ ಸೂಚ್ಯಂಕ ಚೇತರಿಕೆ

stock-market
Published on

ಮುಂಬೈ: ಜಾಗತಿಕ ಮಾರುಕಟ್ಟೆಗಳ ಏರುಗತಿ ಪ್ರವೃತ್ತಿಯ ನಡುವೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್ ಮತ್ತು ಸನ್ ಫಾರ್ಮಾಗಳ ಷೇರುಗಳ ಖರೀದಿ ವಹಿವಾಟು ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಮಂಗಳವಾರ ಚೇತರಿಸಿಕೊಂಡವು.

30-ಷೇರುಗಳ ಬಿಎಸ್‌ಇ ಸೂಚ್ಯಂಕವು 305.09 ಅಂಕಗಳು ಅಥವಾ ಶೇಕಡಾ 0.42 ಏರಿಕೆಯಾಗಿ 73,095.22 ಕ್ಕೆ ಸ್ಥಿರವಾಯಿತು. ದಿನದ ಮೊದಲಾರ್ಧದಲ್ಲಿ ಸೂಚ್ಯಂಕವು ಚಂಚಲತೆಯಿಂದ ಕೂಡಿತ್ತು. ನಿಫ್ಟಿ ಸೂಚ್ಯಂಕವು 76.30 ಅಂಕಗಳು ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 22,198.35 ಕ್ಕೆ ಮುಟ್ಟಿತು.

ಸೂಚ್ಯಂಕಗಳ ಪ್ರಮುಖ ಷೇರುಗಳಾದ ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟಾಟಾ ಸ್ಟೀಲ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಮತ್ತೊಂದೆಡೆ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್ ಮತ್ತು ಎನ್‌ಟಿಪಿಸಿ ಷೇರುಗಳ ಬೆಲೆ ಕುಸಿತ ಕಂಡಿತು.

ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಹಸಿರು ಲಾಭದಲ್ಲಿ ಮುನ್ನಡೆದರೆ, ಸಿಯೋಲ್ ಕುಸಿತ ಕಂಡಿತು. ಐರೋಪ್ಯ ಮಾರುಕಟ್ಟೆಗಳು ಬಹುತೇಕ ಲಾಭ ಕಂಡವು. ಸೋಮವಾರ ಅಮೆರಿಕ ಮಾರುಕಟ್ಟೆಗಳು ಸ್ವಲ್ಪಮಟ್ಟಿಗೆ ಕುಸಿತ ದಾಖಲಿಸಿದವು.

ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಸೋಮವಾರ 352.67 ಅಂಕಗಳಷ್ಟು ಕುಸಿದು 72,790.13 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 90.65 ಅಂಕಗಳಷ್ಟು ಇಳಿಕೆಯಾಗಿ 22,122.05 ಕ್ಕೆ ತಲುಪಿತ್ತು.

"ಇಸ್ರೇಲ್-ಹಮಾಸ್ ಯುದ್ಧದಲ್ಲಿ ಕದನ ವಿರಾಮದ ಭರವಸೆಗಳು ಮತ್ತು ಕಚ್ಚಾ ತೈಲ ಬೆಲೆಗಳ ಕುಸಿತವು ಮಾರುಕಟ್ಟೆಯ ಭಾವನೆಯನ್ನು ಬೆಂಬಲಿಸಿವೆ" ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 285.15 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ಹೇಳಿದೆ.

ಇತರೆ ಸೂಚ್ಯಂಕಗಳು:

ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 39,743.66 (0.10 ಕುಸಿತ)
ಬಿಎಸ್​ಇ ಸ್ಮಾಲ್​ ಕ್ಯಾಪ್​ ಸೂಚ್ಯಂಕ: 45,888.55 (0.25 ಕುಸಿತ)
ನಿಫ್ಟಿ ಮಿಡ್​ ಕ್ಯಾಪ್ 100​ ಸೂಚ್ಯಂಕ: 49,041.20 (0.12 ಕುಸಿತ)
ನಿಫ್ಟಿ ಸ್ಮಾಲ್​ ಕ್ಯಾಪ್ 100​ ಸೂಚ್ಯಂಕ: 16,177.70 (0.28 ಏರಿಕೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net