ಟಿಸಿಎಸ್ 28,149 ರೂ, ಕೋಟಿ ಕುಸಿತ

untitled-design-6-68890d8c25b84
Published on

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಈ ವರ್ಷ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಘೊಷಿಸಿದ ನಂತರ, ಕಳೆದ ಎರಡು ದಿನಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 28,148.72 ಕೋಟಿ ರೂ.ನಷ್ಟು ಕುಸಿದಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ (ಬಿಎಸ್​ಇ) ಮಂಗಳವಾರ ಟಿಸಿಎಸ್ ಷೇರು ಬೆಲೆ ಶೇ. 0.73 ಕಡಿಮೆಯಾಗಿ 3,056.55 ರೂ.ಗೆ ಸ್ಥಿರವಾಯಿತು. ದಿನದ ವಹಿವಾಟಿನ ಮಧ್ಯೆ ಇದು ಶೇ. 1.23ರಷ್ಟು ಕುಸಿದು 3,041 ರೂ.ಗೆ ತಲುಪಿತ್ತು. ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ (ಎನ್​ಎಸ್​ಇ) ಇದು ಶೇ. 0.72ರಷ್ಟು ಕಡಿಮೆಯಾಗಿ 3,057 ರೂ.ಗೆ ಸ್ಥಿರವಾಯಿತು. ಸೋಮವಾರ ಟಿಸಿಎಸ್ ಷೇರುಗಳ ಬೆಲೆ ಸುಮಾರು ಶೇ. 2ರಷ್ಟು ಕುಸಿದಿತ್ತು. ಎರಡು ದಿನಗಳಲ್ಲಿ ಷೇರು ಬೆಲೆ ಶೇ. 2.48ರಷ್ಟು ಬಿದ್ದಿದೆ. ಟಿಸಿಎಸ್​ನ ಮಾರುಕಟ್ಟೆ ಮೂಲಧನ (ಎಂಕ್ಯಾಪ್) 28,148.72 ಕೋಟಿ ರೂ.ನಷ್ಟು ಕಡಿಮೆಯಾಗಿ 11,05,886.54 ಕೋಟಿ ರೂ.ಗೆ ತಲುಪಿದೆ.

ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಯಾದ ಟಿಸಿಎಸ್ ಈ ವರ್ಷ ಜಾಗತಿಕ ಮಟ್ಟದಲ್ಲಿ ಸುಮಾರು ಶೇ. 2ರಷ್ಟು, ಅಂದರೆ 12,261 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ. ಇದರಲ್ಲಿ ಬಹುಪಾಲು ಮಧ್ಯಮ ಮತ್ತು ಹಿರಿಯ ಶ್ರೇಣಿಯ ಉದ್ಯೋಗಿಗಳು ಇದ್ದಾರೆ. ಜೂನ್ 30ರ ಅಂಕಿ ಅಂಶಗಳ ಪ್ರಕಾರ, ಟಿಸಿಎಸ್​ನಲ್ಲಿ 6,13,069 ಉದ್ಯೋಗಿಗಳು ಇದ್ದು, ಇತ್ತೀಚಿನ ತ್ರೖೆಮಾಸಿಕದಲ್ಲಿ 5,000 ಉದ್ಯೋಗಿಗಳನ್ನು ಅದು ಸೇರ್ಪಡೆ ಮಾಡಿಕೊಂಡಿದೆ. ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗುವುದಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆ. ಕೃತಕ ಬುದ್ಧಿಮತ್ತೆ ನಿಯೋಜನೆ, ಮಾರುಕಟ್ಟೆ ವಿಸ್ತರಣೆ ಮುಂತಾದ ಕ್ರಮಗಳು ಇದರಲ್ಲಿ ಇವೆ. ಈ ಹಿನ್ನೆಲೆಯಲ್ಲಿ ಹಲವಾರು ಮರುನಿಯೋಜನೆ ಕ್ರಮಗಳು ನಡೆಯುತ್ತಿವೆ. ನಿಯೋಜನೆ ಸಾಧ್ಯವಾಗದಿರುವ ಸಹೋದ್ಯೋಗಿಗಳನ್ನು ಸಂಸ್ಥೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಕಂಪನಿಯಿಂದ ಸಿಗಬೇಕಾದ ಎಲ್ಲ ಸವಲತ್ತುಗಳು, ಔಟ್​ಪ್ಲೇಸ್​ವೆುಂಟ್, ಕೌನ್ಸೆಲಿಂಗ್ ನೀಡಲಾಗುವುದು ಎಂದು ಟಿಸಿಎಸ್ ಹೇಳಿಕೆಯಲ್ಲಿ ತಿಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net