

ನವದೆಹಲಿ: ಕೇಂದ್ರ ಸರ್ಕಾರದ ಕಾರ್ವಿುಕ ಆಯುಕ್ತರು ಕರೆದಿದ್ದ ಸಭೆಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅಧಿಕಾರಿಗಳು ಗೈರುಹಾಜರಾಗಿದ್ದಾರೆ. ಈಗಾಗಲೇ ನೇಮಕಗೊಂಡಿದ್ದ 600 ಉದ್ಯೋಗಿಗಳ ಆನ್ಬೋರ್ಡಿಂಗ್ ವಿಳಂಬವಾಗಿರುವುದು ಮತ್ತು 12,200 ಉದ್ಯೋಗಿಗಳ ಉದ್ಯೋಗ ಕಡಿತದ ಬಗ್ಗೆ ರ್ಚಚಿಸಲು ಈ ಸಭೆ ಕರೆಯಲಾಗಿತ್ತು. ನಾಸೆಂಟ್ ಇನ್ಪಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (ನೈಟ್ಸ್) ಸಂಘಟನೆ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ನವದೆಹಲಿಯಲ್ಲಿ ಈ ಸಭೆ ಏರ್ಪಾಟಾಗಿತ್ತು. ಆದರೆ ಸಭೆಗೆ ಟಿಸಿಎಸ್ ಅಧಿಕಾರಿಗಳು ಹಾಜರಾಗದೆ, ಇ-ಮೇಲ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಆನ್ಬೋರ್ಡಿಂಗ್ ತಾತ್ಕಾಲಿಕವಾಗಿ ವಿಳಂಬವಾಗಿದ್ದು ಎಲ್ಲಾ ಆಫರ್ ಲೆಟರ್ಗಳನ್ನು ಗೌರವಿಸುವುದಾಗಿ ಟಿಸಿಎಸ್ ಭರವಸೆ ನೀಡಿದೆ. ಇನ್ನೊಂದೆಡೆ, ಟಿಸಿಎಸ್ನ ಉದ್ಯೋಗ ಕಡಿತವನ್ನು ಕಾನೂನುಬಾಹಿರ ಎಂದು ಖಂಡಿಸಿರುವ, ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಒಕ್ಕೂಟ (ಕಿಟು), ಟಿಸಿಎಸ್ ಕಂಪನಿಯು ಕೈಗಾರಿಕಾ ವಿವಾದಗಳ ಕಾಯ್ದೆ 1947ರ ಉಲ್ಲಂಘನೆ ಮಾಡಿದ್ದು, ಅದರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.