

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಾರ್ಖಾನೆಗಳ ತ್ಯಾಜ್ಯ, ರಸಗೊಬ್ಬರ ಸೇರಿ ಇತರೆ ವಿಷಾಯುಕ್ತ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಕಲುಷಿತವಾಗುತ್ತಿದೆ. ಜಲಾಶಯ ಹಾಗೂ ನದಿಯಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಜೀವ ಸಂಕುಲಕ್ಕೆ ಸಂಕಟ ಎದುರಾಗಿದೆ.
ನೀರಿಗೆ ಬಣ್ಣ ಇರದಿದ್ದರೂ, ಸಮುದ್ರಾ, ಜಲಾಶಯ, ಕೆರೆ, ನದಿಗಳು ಸೇರಿದಂತೆ ಜಲರಾಶಿ ಇದ್ದಕಡೆ ಸಾಮಾನ್ಯವಾಗಿ ಆಕಾಶದ ಬಣ್ಣವನ್ನು ಹೋಲುತ್ತದೆ. ಆದರೆ, ತುಂಗಭದ್ರಾ ಜಲಾಶಯದಲ್ಲಿ ಮಾತ್ರ ನೀರು ಕೆಲ ದಿನಗಳ ವರೆಗೆ ಹಸಿರು ಬಣ್ಣಕ್ಕೆ ತಿರುಗುತ್ತದೆ. ಜಲಾನಯನ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಒಂದಲ್ಲ ಒಂದು ರೀತಿಯ ಕಾರ್ಖಾನೆಗಳು ನಿರ್ಮಾಣವಾಗುತ್ತಿವೆ. ಕಾರ್ಖಾನೆಗಳಿಂದ ಬರುವ ತ್ಯಾಜ್ಯ ಹಾಗೂ ಹೊಲ-ಗದ್ದೆಗಳಿಗೆ ಬಳಸುವ ರಸಗೊಬ್ಬರ ಸೇರಿ ಇತರೆ ತ್ಯಾಜ್ಯಯುಕ್ತ ಅಂಶಗಳು ಮಳೆ ನೀರಿನಲ್ಲಿ ಹರಿದು ಜಲಾಶಯದ ಮಡಿಲು ಸೇರುತ್ತಿದೆ. ಇದರಿಂದ ಜಲಾಶಯ ವಿಷಯುಕ್ತವಾಗುತ್ತಿದೆ. ಹಾಗೂ ಹಸಿರು ಬಣ್ಣ ಬದಲಾವಣೆಗೂ ಕಾರಣ ಎಂಬುದು ತಜ್ಞರ ಎಚ್ಚರಿಕೆಯಾಗಿದೆ.
ಈ ಹಿಂದೆ ಜಲಾಶಯದ ಕೆಲ ಭಾಗದಲ್ಲಿ ಮಾತ್ರ ಹಸಿರು ಬಣ್ಣ ತಿರುಗುತ್ತಿತ್ತು. ಆದರೆ, ಈ ವರ್ಷ ಸಂಪೂರ್ಣ ಜಲಾಶಯ ಹಸಿರು ಬಣ್ಣಕ್ಕೆ ತಿರುಗಿದೆ. ಹಾಗೂ ನದಿಯಲ್ಲೂ ಹಸಿರು ಬಣ್ಣ ತಿರುಗಿದೆ. ತುಂಗ ಹಾಗೂ ಭದ್ರೆಯ ತವರೂರು ಚಿಕ್ಕಮಗಳೂರುರಿನಲ್ಲಿ ಆರಂಭವಾಗಿ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳು ಸೇರಿದಂತೆ ಆಂದ್ರ ಹಾಗೂ ತೆಲಂಗಾಣ ರಾಜ್ಯಗಳಿಗೂ ಕುಡಿವ ನೀರಿಗಾಗಿ ನದಿ ನೀರನ್ನು ಅವಲಂಬಿಸಲಾಗಿದೆ. ಆದರೆ ನದಿಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಕೂಡ ಈ ಹಿಂದರ ಬಹಿರಂಗವಾಗಿದೆ. ತುಂಗಾ ಎನ್ನುವ ಗಾದೆಯನ್ನು ಸುಳ್ಳಾಗಿಸುತ್ತಿದೆ.
ಜಲಾಶಯಕ್ಕೆ ಹೊಸ ನೀರು ಹರಿದು ಬಂದ ಕೆಲ ದಿನಗಳ ನಂತರ ನೀರು ಹಸಿರಾಗುವುದು ಹಲವು ವರ್ಷಗಳಿಂದ ಸಾಮಾನ್ಯವಾಗಿದೆ. ಈ ಸಮಸ್ಯೆಗೆ ನಿಖರ ಕಾರಣ ಇದುವರೆಗೂ ತಿಳಿದು ಬಂದಿಲ್ಲ. 24 ವರ್ಷಗಳ ಹಿಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ತಂಡವೊAದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ನೀರು ಹಸಿರಾಗಲು ಬ್ಲೂ ಗ್ರೀನ್ ಅಲ್ಗೆ ಕಾರಣ ಎಂಬ ಅಂಶ ವರದಿಯಲ್ಲಿ ನಮೂದಿಸಿತ್ತು. ನದಿ ಪಾತ್ರದ ಜಮೀನುಗಳಿಂದ ಅತಿಯಾದ ರಸಗೊಬ್ಬರ ಮಿಶ್ರಿತ ನೀರು ಜಲಾಶಯ ಸೇರುವುದು, ವಾತಾವರಣದಲ್ಲಿನ ವ್ಯತ್ಯಾಸದಿಂದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ ಎಂದು ತಜ್ಞರ ವರದಿಯಾಗಿದೆ.
ಜಲಾಶಯದ ನೀರನ್ನು ಕೃಷಿ, ಕೈಗಾರಿಕೆ ಜತೆಗೆ ಜನ ಜಾನುವಾರುಗಳಿಗೆ ಕುಡಿಯಲು ಬಳಸಲಾಗುತ್ತಿದೆ. ಮತ್ತೊಂದೆಡೆ ಜಲಾಶಯದಲ್ಲಿ ನೀರು ನಾಯಿ, ಮೀನು, ಏಡಿ, ಆಮೆ ಸೇರಿ ಹಲವು ಜಲಚರ ಜೀವಿಗಳು, ಪ್ರಾಣಿ, ಪಕ್ಷಿಗಳಿಗೂ ಜಲಾಶಯದ ನೀರೇ ಆಧಾರವಾಗಿದೆ. ಜಲಾಶಯದ ನೀರು ಮೇಲಿಂದ ಮೇಲೆ ಹಸಿರಾಗುತ್ತಿರುವುದು ವನ್ಯಜೀವಿ ಪ್ರೇಮಿಗಳು, ರೈತರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೆ ಸಿಲುಕಿಸಿದೆ.
ತ್ಯಾಜ್ಯಯುಕ್ತ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್, ನೈಟ್ರೇಟ್, ಫಾಸ್ಟೇಟ್ ಮತ್ತು ಸಿಟ್ ಅಂಶಗಳಿರುತ್ತವೆ. ಮೂರು ದಿನಗಳವರೆಗೆ ಸತತ ಮೋಡ ಮುಸುಕಿದ ವಾತಾವರಣ, ಒಮ್ಮಿಂದೊಮ್ಮೆಲೆ ಬಿಸಿಲು ಬೀಳುವುದರಿಂದ ಸೈನೋ ಬ್ಯಾಕ್ಟೀರಿಯಾ (ಬ್ಲೂ ಗ್ರೀನ್ ಅಲ್ಗೆ) ಹುಟ್ಟಿಕೊಳ್ಳುತ್ತದೆ. ಆಗ ಜಲಾಶಯದ ನೀರು ದಿಢೀರ್ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಹರಿಯುವ ನೀರಿನಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜಲಾಶಯದ ನೀರನ್ನು ಶುದ್ಧೀಕರಿಸದೇ ನೇರವಾಗಿ ಕುಡಿಯಬಾರದು. ಹಸಿರಾದ ನೀರನ್ನು ಕುಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2008, 2009ರಲ್ಲಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಪಾರ ಮೀನುಗಳು ಸತ್ತು ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಅಶುದ್ಧ ನೀರಿನಲ್ಲಿ ಈಜಾಡಿದರೆ ಚರ್ಮ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಶುದ್ಧೀಕರಿಸದ ನೀರನ್ನು ನೇರವಾಗಿ ಕುಡಿದರೆ, ವಾಂತಿ ಭೇದಿ ಉಲ್ಬಣವಾಗಲಿದೆ. ಜಲಾಶಯದ ನೀರು ಪ್ರತಿ ವರ್ಷ ಹಸಿರಾಗುತ್ತಿದ್ದರೂ ಸರ್ಕಾರ ಪರಿಣಾಮಕಾರಿ ಕ್ರಮಕೈಗೊಂಡಿಲ್ಲ ಎಂಬುದು ಪರಿಸರ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.