

ಹೊಸಪೇಟೆ: ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸದೇ ನೀರನ್ನು ಉಳಿಸಿಕೊಂಡು ಸಹ ತುಂಗಭದ್ರಾ ಡ್ಯಾಮ್‌ಗೆ ಹೊಸಗೇಟ್ ಅಳವಡಿಸಬಹುದು ಎಂಬುದಾಗಿ ತಜ್ಞರು ಮಂಗಳವಾರ ಮಹತ್ವದ ಸಲಹೆ ನೀಡಿದರು.
ಟಿ.ಬಿ.ಡ್ಯಾಮ್‌ನ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ, ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ ಸೇರಿದಂತೆ ಇನ್ನೀತರರು ಮಂಗಳವಾರ ಇಡೀ ದಿನ ತುಂಗಭದ್ರಾ ಡ್ಯಾಮ್ ಪ್ರದೇಶದಲ್ಲಿದ್ದು, ಗೇಟ್ ದುರಸ್ತಿಯ ಮೇಲುಸ್ತುವಾರಿ ಪರಿಶೀಲಿಸಿದರು.
ನ್ಯಾಷನಲ್ ಡ್ಯಾಮ್ ಗೇಟ್ ಎಕ್ಸಪರ್ಟ್ ಕಣ್ಣಯ್ಯ ನಾಯ್ಡು, ತುಂಗಭದ್ರಾ ಬೋರ್ಡ್ನ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಎಂ.ಡಿ., ಕರ್ನಾಟಕ ಹಾಗೂ ಆಂದ್ರ ನೀರಾವರಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್, ನ್ಯಾಷನಲ್ ಡ್ಯಾಮ್ ಸೇಫಟಿ ಏಜೆನ್ಸಿಯ ಮುಖ್ಯ ಎಂಜಿನಿಯರ್, ಜೆಎಸ್‌ಡಬ್ಲೂö್ಯನ ಎಕ್ಸಪರ್ಟ, ಹಿಂದುಸ್ತಾನ್ ಸ್ಟೀಲ್ ವರ್ಕ್, ನಾರಾಯಣ ಸ್ಟೀಲ್ ವರ್ಕ ಗೇಟ್ ತಜ್ಞರು ಸೇರಿದಂತೆ ಇನ್ನೀತರ ತಜ್ಞರೊಂದಿಗೆ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮಾತುಕತೆ ನಡೆಸಿದರು.
ಈಗ ಹಾಳಾಗಿರುವ ಗೇಟ್ ಒಟ್ಟು 60 ಅಡಿ ಉದ್ದ ಇದೆ. ಇಲ್ಲಿ ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದಾಗಿದೆ ಎಂದು ತಜ್ಞರು ಸಲಹೆ ಮಾಡಿದರು. ಜಿಂದಾಲ್ ಸೇರಿದಂತೆ ವಿವಿಧೆಡೆ ಸೆಗ್ಮೇಂಟ್‌ಗಳ ತಯಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕರ್ನೂಲ್ ಸಂಸದರಾದ ಪಂಚಲಿAಗ ನಾಗರಾಜ, ಆಲೂರು ಮತ್ತು ಮಂತ್ರಾಲಯದ ಮುಖಂಡರಾದ ವೀರಭದ್ರಗೌಡ, ರಾಘವೇಂದ್ರ ರೆಡ್ಡಿ ಅವರು ಸಹ ಮಂಗಳವಾರ ಟಿ.ಬಿ.ಡ್ಯಾಮ್‌ಗೆ ಭೇಟಿ ನೀಡಿ ಇಲ್ಲಿನ ಜನಪ್ರತಿನಿಧಿಗಳ ಜತೆ ಗೇಟ್ ದುರಸ್ತಿಯ ಬಗ್ಗೆ ಚರ್ಚಿಸಿದರು.