

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವೇತನವಿಲ್ಲದೆ ಸಂಕಷ್ಟ ಅನುಭವಿಸಿದ್ದ ಟಿಬಿ ಡ್ಯಾಂ ನೌಕರರು ಇದೀಗ ನಿರಾಳರಾಗಿದ್ದಾರೆ. ಬ್ಯಾಂಕ್ ಸಂಬಂಧಿತ ಇದ್ದ ಜಟಿಲ ಸಮಸ್ಯೆ ಇದೀಗ ಬಗೆಹರಿಯತೊಡಗಿದೆ. ಆಂಧ್ರದಲ್ಲಿ ಹಗರಣ ಆರೋಪಗಳ ಹಿನ್ನೆಲೆಯಲ್ಲಿ ಟಿಬಿ ಬೋರ್ಡ್ ಸಂಬಂಧಿಸಿತ ಬ್ಯಾಂಕ್ ಖಾತೆಗಳನ್ನು ಬಳಸದಂತೆ ಫ್ರೀಜ್ ಮಾಡಲಾಗಿತ್ತು. ಇದೀಗ ನೌಕರರ ಒತ್ತಡದ ಪರಿಣಾಮವಾಗಿ ತನ್ನ ಆದೇಶವನ್ನು ಆಂಧ್ರ ಸರ್ಕಾರ ಹಿಂಪಡೆದಿದ್ದು, ಬ್ಯಾಂಕ್ ಖಾತೆಗಳ ಬಳಕೆಗೆ ಅನುಮತಿ ಕೂಡ ನೀಡಿದೆ. ಇನ್ನೂ ಕರ್ನಾಟಕ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ಕಳೆದ ಕೆಲ ತಿಂಗಳಿಂದ ಟಿಬಿಬಿಯಲ್ಲಿನ ಆರ್ಥಿಕ ಸಂಕಷ್ಟ ಎದುರಾಗಿತ್ತು. ನೌಕರರ ವೇತನ ಹಾಗೂ ನಿವೃತ್ತ ನೌಕರರ ಪಿಂಚಣಿ ಕೂಡ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಳೆದ ಅವಧಿಯ ಆಂಧ್ರ ಸರ್ಕಾರದಲ್ಲಿ ಎಲ್‌ಎಲ್‌ಸಿ ಕಾಮಗಾರಿ ಟೆಂಡರ್‌ನಲ್ಲಿ ಹಗರಣ ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಕೂಡಲೇ ಟಿಬಿಬಿಯ ಎಲ್ಲ ಖಾತೆಗಳನ್ನು ಫ್ರೀಜ್ ಮಾಡಿ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರಕ್ಕೂ ಪತ್ರ ವ್ಯವಹಾರ ನಡೆಸಿತ್ತು. ಎರಡೂ ರಾಜ್ಯ ಸರ್ಕಾರಗಳಿಂದ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಿದ್ದವು. ಇವೇ ಬ್ಯಾಂಕ್ ಖಾತೆಗಳಿಂದ ಇಲ್ಲಿನ ಉದ್ಯೋಗಿಗಳಿಗೆ ವೇತನ ಪಾವತಿ ಮಾಡಲಾಗುತ್ತದೆ. ಇದರಿಂದ ಮಂಡಳಿಯ ಕಾರ್ಯದರ್ಶಿಯಿಂದ ಹಿಡಿದು ಕೆಳಹಂತದ ಯಾವುದೇ ಸಿಬ್ಬಂದಿಗೆ ವೇತನ ನೀಡಿರಲಿಲ್ಲ ಎನ್ನಲಾಗಿದೆ. ಜಲಾಶಯದ ನಿರ್ವಹಣೆ ವೆಚ್ಚಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಜಲಾಶಯದ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿಗೆ ನಿರ್ವಹಣೆಗೆ ಸಂಬಂಧಿಸಿದ ಒಟ್ಟು ಮೂರು ಪ್ರತ್ಯೇಕ ಬ್ಯಾಂಕ್ ಖಾತೆಗಳಿವೆ. ಹಗರಣ ಆರೋಪದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರದ ಹಣಕಾಸು ಮಂತ್ರಿಗಳು ಟಿಬಿ ಬೋರ್ಡ್‌ನಲ್ಲಿ ಖಾತೆಗಳನ್ನು ಬಂದ್ ಮಾಡಿ, ಹಣ ಬಳಕೆ ಮಾಡದಂತೆ ಆದೇಶ ಹೊರಡಿಸಿತ್ತು. ಇದೇ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಫ್ರೀಜ್ ಮಾಡಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಗೇಟ್ ದುರಸ್ತಿ ಮಾಡಿದವರಿಗೆ ಸಂಭಾವನೆ ಕೂಡ ನೀಡಿರಲಿಲ್ಲ. ಕಳೆದ ಎರಡು ತಿಂಗಳಿಂದ ಯಾವುದೇ ನೌಕರರಿಗೆ ವೇತನ ನೀಡಿರಲಿಲ್ಲ. ಇದರಿಂದ ಕೆರಳಿದ ನೌಕರರು ಕಳೆದ ನ.28ರಂದು ಪ್ರತಿಭಟನೆ ನಡೆಸಿ, ನೌಕರರ ಸಂಘದಿಂದ ಆಂಧ್ರದ ನೀರಾವರಿ ಮತ್ತು ಹಣಕಾಸು ಸಚಿವರನ್ನು ಕೂಡ ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಖಾತೆಗಳನ್ನು ಮುಂದುವರಿಸಲು ಅನುಮತಿ ನೀಡಿ ಮಂಡಳಿಗೆ ಆದೇಶ ನೀಡಿದೆ. ಖಾತೆಗಳು ಎರಡೂ ರಾಜ್ಯ ಸರ್ಕಾರಗಳಿಂದ ಫ್ರೀಜ್ ಆಗಿರುವುದರಿಂದ ಇಗ ರಾಜ್ಯ ಸರ್ಕಾರಕ್ಕೆ ಆಂಧ್ರದ ಆದೇಶ ಪತ್ರವನ್ನು ಲಗತ್ತಿಸಿ ಅನುಮತಿ ನೀಡುವಂತೆ ಪತ್ರ ಬರೆದಿದ್ದು, ಕೆಲವೇ ದಿನಗಳಲ್ಲಿ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದು, ಸ್ಥಗಿತಗೊಂಡಿರುವ ಖಾತೆಗಳಿಂದ ನೌಕರರಿಗೆ ಬಾಕಿ ಇರುವ ವೇತನ ಹಾಗೂ ನಿರ್ವಹಣೆ ಕೆಲಸಗಳಿಗೆ ಹಣಕಾಸು ಬಳಕೆ ಮಾಡಲಾಗುತ್ತದೆ.
ವೇತನವಿಲ್ಲದೆ ಸಂಕಷ್ಟ ಅನುಭವಿಸಿದ್ದ ಟಿಬಿ ಡ್ಯಾಂ ನೌಕರರು, ಇದೀಗ ಬಂದ್ ಆಗಿದ್ದ ಮಂಡಳಿ ಖಾತೆಗಳನ್ನು ಬಳಸಲು ಅನುಮತಿ ನೀಡಿರುವುದರಿಂದ ಸಂತಸಗೊಂಡಿದ್ದಾರೆ. ಇದರ ಜತೆಗೆ ಡ್ಯಾಂನಲ್ಲಿ ನಿರ್ವಹಣೆ ಕೆಲಸಗಳು ಸೇರಿದಂತೆ ಹಲವಾರು ಬಾಕಿ ಪಾವತಿ ಮಾಡಲಿದೆ.
ಟಿಬಿ ಡ್ಯಾಂ ಖಾತೆಗಳನ್ನು ಈ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಖಾತೆಗಳನ್ನು ಮುಂದುವರಿಸಲು ಆಂಧ್ರ ಸರ್ಕಾರ ಅನುಮತಿ ನೀಡಿದೆ. ಈ ಆದೇಶದೊಂದಿಗೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮತಿ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಒ.ಆರ್.ಕೆ.ರೆಡ್ಡಿ, ಕಾರ್ಯದರ್ಶಿ, ಟಿಬಿ ಬೋರ್ಡ್