ಕ್ಷಯಮುಕ್ತ ಭಾರತಕ್ಕಾಗಿ ನೂರು ದಿನಗಳ ಅಭಯಾನ

Arogya soudha
Published on

ಬೆಂಗಳೂರು : ಭಾರತವನ್ನು 2025ರ ವೇಳೆಗೆ ಕ್ಷಯ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಕಾರ್ಯತಂತ್ರ ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೂರು ದಿನಗಳ ಕ್ಷಯಮುಕ್ತ ಭಾರತ ಅಭಿಯಾನ ಆರಂಭಿಸಿದೆ.

ರಾಜ್ಯಾದ್ಯಂತ ಕ್ಷಯರೋಗಿಗಳ ಪತ್ತೆ ತೀವ್ರಗೊಳಿಸಲಾಗಿದ್ದು, ಮನೆ ಮನೆ ಭೇಟಿ ನೀಡುವ ಮೂಲಕ ಮದ್ಯವ್ಯಸನಿಗಳು, ಧೂಮಪಾನಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವವರು, ಎಚ್‌ಐವಿ ಸೋಂಕಿತರು, ಮಧುಮೇಹಿಗಳು ಹಾಗೂ ಕ್ಷಯರೋಗಿಗಳ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸಲಾಗುವುದು. ಹೊಸ ರೋಗಿಗಳು ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಆರಂಭಿಸಿ, ಮರಣ ಪ್ರಮಾಣ ಕಡಿಮೆ ಮಾಡುವುದು ಅಭಿಯಾನದ ಉದ್ದೇಶವಾಗಿದೆ.

ಜಾಗೃತಿ ಕಾರ್ಯಕ್ರಮ: ಅಭಿಯಾನದಡಿ ಟಿಬಿ ಇತಿಹಾಸ ಮತ್ತು ಅದರ ಪರಿಣಾಮಗಳು ಮತ್ತು ಚಿಕಿತ್ಸೆ ಕುರಿತು ಬೀದಿ ನಾಟಕಗಳು, ಯಕ್ಷಗಾನ ಮತ್ತು ಬಯಲಾಟಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಲ್ಲದೆ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಸಮುದಾಯದಲ್ಲಿ ಕ್ಷಯರೋಗ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುವುದು. ಟಿಬಿ ಪರೀಕ್ಷೆ, ಚಿಕಿತ್ಸೆ ಕುರಿತು ಕರಪತ್ರಗಳನ್ನು ಹಂಚುವುದು. ವೈದ್ಯರಿಂದ ಅರಿವು ಮೂಡಿಸುವುದು. ರೋಗಿಗಳಿಗೆ ಪೌಷ್ಠಿಕ ಆಹಾರ ಪೂರೈಕೆಯನ್ನು ಬೆಂಬಲಿಸುವುದು. ಕೈಗಾರಿಕೆಗಳು, ಸರ್ಕಾರಿ ಕಚೇರಿಗಳಲ್ಲಿ ನಿಕ್ಷಯ್ ಶಿಬಿರ ನಡೆಸಿ ಕ್ಷಯರೋಗ ತಪಾಸಣೆ ಮಾಡುವುದು ಇತ್ಯಾದಿ ಕಾರ್ಯಗಳು ನಡೆಯುತ್ತಿವೆ.

ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ:

ಜಿಲ್ಲಾ ಆರೋಗ್ಯ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಗ್ರಾಮಪಂಚಾಯ್ತಿ ಕಾರ್ಯಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕ ನೆರವು, ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net