ರಾಜ್ಯದ ಸರ್ಕಾರಿ ಐಟಿಐಗಳಿಗೆ ಟಾಟಾ ಸ್ಪರ್ಶ

Front Lead 2 Oct
Published on

ಬೆಂಗಳೂರು: ಸೊರಗುತ್ತಿರುವ ರಾಜ್ಯದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳ ಪಾಲಿಗೆ ಆಶಾಕಿರಣ ಗೋಚರಿಸಿದೆ. ಟಾಟಾ ಟೆಕ್ನಾಲಜೀಸ್ ಲಿ. ಸಹಭಾಗಿತ್ವದಡಿ 150 ಐಟಿಐಗಳನ್ನು 4636.50 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಐಟಿಐಗಳ ಮೇಲ್ದರ್ಜೆ ಜತೆಯಲ್ಲೇ ಪ್ರಸ್ತುತ ಕೈಗಾರಿಕೆ ಕ್ಷೇತ್ರಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲ ಸೃಷ್ಟಿಸಲು ಬದಲಾವಣೆ ತರುವುದು ಸೇರಿದಂತೆ ಡಿಜಿಟಲ್ ಉಪಕ್ರಮ ತರಲಾಗುತ್ತಿದೆ. ಟಾಟಾ ಟೆಕ್ನಾಲಜೀಸ್ ಈಗಾಗಲೇ ಮಹಾರಾಷ್ಟ್ರದಲ್ಲಿ ಇದೇ ರೀತಿ ಯೋಜನೆ ಕೈಗೆತ್ತಿಕೊಂಡಿದ್ದು, ಮೂರು ವರ್ಷದಲ್ಲಿ 419 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಒಪ್ಪಂದ ಮಾಡಿಕೊಂಡಿದೆ.

ಪಾಲುದಾರಿಕೆ ಪಾತ್ರವೇನು?: 150 ಸ್ವಂತ ಕಟ್ಟಡದಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಟಾಟಾ ಟೆಕ್ನಾಲಜೀಸ್ ಸಹಯೋಗದೊಂದಿಗೆ ಆಧುನಿಕ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಹೊಸ ತಂತ್ರಜ್ಞಾನ ಯಂತ್ರೋಪಕರಣ ಅಳವಡಿಸಲಾಗುತ್ತದೆ. ಇದನ್ನೂ ಓದಿ: VIRAL | ರಸ್ತೆ ಬದಿ ಪೊದೆಯಲ್ಲಿ ರಾಹುಲ್: ವಿಡಿಯೋ ವೈರಲ್​.. ಹಿನ್ನೆಲೆ ಏನು..?

ಕೈಗಾರಿಕೆಗಳ ಜತೆ ಲಿಂಕೇಜ್/ಪಾಲುದಾರಿಕೆ ಮಾಡಿಕೊಂಡು ಉದ್ಯೋಗಕ್ಕಾಗಿ ಟೆಕ್ನಾಲಜಿ ಹಬ್​ಗಳನ್ನು ತೆರೆದು ತರಬೇತಿ ಪಡೆಯುವವರಿಗೆ ರಾಜ್ಯದ ಹಾಗೂ ಹೊರ ರಾಜ್ಯದ ಉದ್ದಿಮೆಗಳ ಬೇಡಿಕೆಗೆ ಅನುಸಾರವಾಗಿ ಕೌಶಲ ಉನ್ನತೀಕರಿಸಲಾಗುತ್ತದೆ.

ರಾಜ್ಯದ ಐಟಿಐ ಸ್ಥಿತಿಗತಿ
  • 270 ಸರ್ಕಾರಿ, 196 ಅನುದಾನಿತ, 1247 ಖಾಸಗಿ ಐಟಿಐಗಳಿವೆ
  • ಎಲ್ಲ ವರ್ಗದ ಐಟಿಐಗಳಲ್ಲಿ 1.8 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ
  • 150 ಸರ್ಕಾರಿ ಐಟಿಐಗಳಷ್ಟೇ ಸ್ವಂತ ಕಟ್ಟಡಗಳಲ್ಲಿವೆ
  • ದಿನಮಾನಕ್ಕೆ ತಕ್ಕಂತೆ ಇಂಡಸ್ಟ್ರಿ-ಐಟಿಐ ನಡುವೆ ಸ್ಕಿಲ್ ಗ್ಯಾಪ್ ಇದೆ
ಸಂಪುಟದ ಇತರ ತೀರ್ಮಾನಗಳು
  1. ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜಿಸುವ ಸಲುವಾಗಿ ಮೌಲಾನಾ ಆಜಾದ್ ಟ್ರಸ್ಟ್ ರಚಿಸಲು 25 ಕೋಟಿ ರೂ.
  2. ವಿಜಯಪುರ ತಾಲೂಕಿನ ಬಬಲೇಶ್ವರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ.
  3. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತಕ್ಕೆ ನೀಡಿದ ರಿಯಾಯಿತಿ ಅವಧಿಯ ವಿಸ್ತರಣೆ.
  4. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆಗಳು (ನೇಮಕಾತಿ) (ತಿದ್ದುಪಡಿ), 2020ಕ್ಕೆ ಅನುಮೋದನೆ.
  5. ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್​ಸ್ಟೆಬಲ್, ಸಬ್​ಇನ್​ಸ್ಪೆಕ್ಟರ್ ಮತ್ತು ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಟುಗಳ ನೇರ ನೇಮಕಾತಿ(ವಿಶೇಷ) ನಿಯಮ 2020ಕ್ಕೆ ಅನುಮೋದನೆ.
  6. ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿ ಭೂ ಕೆಳಮೈ ಗಣಿ ಅಭಿವೃದ್ಧಿ ಕಾರ್ಯಗಳ ಪರಿಷ್ಕೃತ ಅಂದಾಜು ಮೊತ್ತ 63.08 ಕೋಟಿ ರೂ.ಗೆ ಒಪ್ಪಿಗೆ
  7. ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವರ್ಗಾವಣೆೆ ನಿಯಂತ್ರಣ) ನಿಯಮ 2020ಕ್ಕೆ ಅನುಮೋದನೆ.
  8. ಬೆಂಗಳೂರಿನ ಮಾಗಡಿ ರಸ್ತೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಡಾ.ಜಗಜೀವನ್ ರಾಂ ಸಂಶೋಧನೆ ಮತ್ತು ತರಬೇತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ 98.93 ಕೋಟಿ ರೂ.
  9. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿತರಿಸಲು ವಿವಿಧ ವೃತ್ತಿಯ 8980 ಟೂಲ್ ಕಿಟ್​ಗಳನ್ನು 11.75 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು ಅವಕಾಶ.
  10. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ರಾಮತೀರ್ಥ ಬಡಾವಣೆಯಲ್ಲಿ 7 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.
ಸರ್ಕಾರದ ಪಾತ್ರವೇನು?

ಪ್ರತಿ ಐಟಿಐಗೆ  3.71 ಕೋಟಿ ರೂ., ಶೇ.18 ಜಿಎಸ್​ಟಿ ಒಟ್ಟು  4.38 ಕೋಟಿ ರೂ. ನಂತೆ 657 ಕೋಟಿ ರೂ.ಭರಿಸಬೇಕು. ಸದ್ಯ ಈ 150 ಐಟಿಐ ಕಾಲೇಜುಗಳಿಗೆ ಹೊಸ ಯಂತ್ರೋಪಕರಣ ಇಡಲು ಹೆಚ್ಚುವರಿ ಕಟ್ಟಡ ಕಾಮಗಾರಿ, ದುರಸ್ತಿ, ಪೀಠೋಪಕರಣ, ಹೆಚ್ಚುವರಿ ವಿದ್ಯುತ್ ಸಂಪರ್ಕ, ನೆಟ್​ವರ್ಕಿಂಗ್ ಇತ್ಯಾದಿಗಾಗಿ ಅಗತ್ಯ ಅಂದಾಜು ಮೊತ್ತ 105 ಕೋಟಿ ರೂ.ಗಳನ್ನು ಕರ್ನಾಟಕ ಕೌಶಲ ಅಭಿವೃದ್ಧಿಯಲ್ಲಿರುವ ಅನುದಾನ ಬಳಸಿಕೊಂಡು ಕಾಮಕಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗೆಯೇ 657 ಕೋಟಿ ರೂ.ಗಳನ್ನು ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಸಾಲ ಪಡೆಯಲೂ ಸಂಪುಟ ಒಪ್ಪಿಗೆ ನೀಡಿದೆ. ಇದನ್ನೂ ಓದಿ:ಯುಪಿ ಸರ್ಕಾರದ ವಿರುದ್ಧ ದೇವೇಗೌಡರ ಆಕ್ರೋಶ; ಪಿಯಾಂಕಾ, ರಾಹುಲ್​​ರನ್ನು ಬಿಡುಗಡೆ ಮಾಡಲು ಆಗ್ರಹ

ಏನೇನು ಒಪ್ಪಂದ?
  1. ಯೋಜನೆ ವ್ಯಾಪ್ತಿಗೆ ಬರುವ ಪ್ರತಿ ಐಟಿಐಗೆ 30.91 ಕೋಟಿ ರೂ. ವೆಚ್ಚ
  2. ಇದರಲ್ಲಿ ಶೇ.88ರ ಪಾಲುದಾರಿಕೆಯಂತೆ ಟಾಟಾ 27.20 ಕೋಟಿ ರೂ.ಬಳಸುತ್ತದೆ
  3. ಉಳಿದಿದ್ದನ್ನು (3.71 ಕೋಟಿ ರೂ.)ಸರ್ಕಾರ ಭರಿಸಬೇಕಾಗುತ್ತದೆ
  4. ಒಟ್ಟಾರೆ ಟಾಟಾ ಕಡೆಯಿಂದ 4080 ಕೋಟಿ ರೂ. ಭರಿಸಲಾಗುತ್ತದೆ.
  5. ಮುಂದಿನ ಐದು ವರ್ಷದಲ್ಲಿ ಉಚಿತ ನಿರ್ವಹಣೆ, 2 ವರ್ಷಕ್ಕೆ 300 ಜನರನ್ನು ತರಬೇತಿದಾರರನ್ನಾಗಿಸುವುದರ ಜತೆ ಉಚಿತ ಆನ್​ಲೈನ್ ವೇದಿಕೆ ಒದಗಿಸಲಿದೆ.
ಕಟ್ಟಡ ಕಾರ್ವಿುಕರಿಗೆ ಸೇಫ್ಟಿ ಕಿಟ್

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ 76 ಸಾವಿರ ಕಟ್ಟಡ ಕಾರ್ವಿುಕರಿಗೆ ಅವಶ್ಯವಾದ ಮೇಸನ್ ಟೂಲ್ ಕಿಟ್​ಗಳನ್ನು -ಠಿ;23.18 ಕೋಟಿ ವೆಚ್ಚದಲ್ಲಿ ಖರೀದಿಸಲು ಹಾಗೂ 90 ಸಾವಿರ ಕಟ್ಟಡ ಕಾರ್ವಿುಕರಿಗೆ ಅವಶ್ಯಕವಾದ ಸೇಫ್ಟಿ ಕಿಟ್​ಗಳನ್ನು 42.39 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಮೇಸನ್ ಕಿಟ್​ನಲ್ಲಿ ಕರಣೆಗಳು, ಮಟ್ಟಗೋಲು, ಮೂಲೆಮಟ್ಟ ಇತ್ಯಾದಿ ಪರಿಕರಗಳಿದ್ದರೆ, ಸೇಫ್ಟಿ ಕಿಟ್​ನಲ್ಲಿ ಜಾಕೆಟ್, ಹೆಲ್ಮೆಟ್, ಗ್ಲೌಸ್, ಶೂಸ್ ಇರುತ್ತದೆ ಎಂದು ತಿಳಿದುಬಂದಿದೆ.

ಮತ್ತೆ ನಾಲ್ಕು ಸುಗ್ರೀವಾಜ್ಞೆ

ಬೆಂಗಳೂರು: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಮತ್ತು ಕೈಗಾರಿಕೆ ವಿವಾದಗಳ ಕಾಯ್ದೆಗಳ ತಿದ್ದುಪಡಿ ಜಾರಿಗೆ ವಿಧಾನಮಂಡಲ ಅಧಿವೇಶನದಲ್ಲಿ ಪೂರ್ಣ ಸಹಮತಿ ಸಿಗದ ಕಾರಣ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ಎರಡು ವಿಧೇಯಕಗಳು ವಿಧಾನಪರಿಷತ್​ನಲ್ಲಿ ಅನುಮೋದನೆಗೆ ಬಾಕಿ ಇವೆ, ಕೈಗಾರಿಕೆ ವಿವಾದ ಕಾಯ್ದೆಗೆ ವಿಧಾನ ಪರಿಷತ್​ನಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಹೀಗಾಗಿ ಅಧಿವೇಶನ ಪೂರ್ವಭಾವಿಯಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಕಾಯ್ದೆಯನ್ನು ಜೀವಂತವಾಗಿಡುವುದಕ್ಕಾಗಿ ಪುನಃ ಸುಗ್ರೀವಾಜ್ಞೆ ತರಲಾಗಿದೆ. ಮುಂದಿನ ಹಂತವಾಗಿ ಸಂಪುಟದ ತೀರ್ವನವನ್ನು ರಾಜ್ಯಪಾಲರಿಗೆ ಕಳಿಸಿ ಒಪ್ಪಿಗೆ ಪಡೆಯಲಾಗುತ್ತದೆ.

ಮುಂದಿನ 6 ತಿಂಗಳು ಈ ಸುಗ್ರೀವಾಜ್ಞೆಗೆ ಜೀವ ಇರಲಿದ್ದು, ಅಷ್ಟರೊಳಗೆ ಸರ್ಕಾರ ಅಧಿವೇಶನ ಕರೆದು ಎರಡೂ ಸದನಗಳ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಕೈಗಾರಿಕೆ ಕಾಯ್ದೆ ವಿಧಾನಪರಿಷತ್​ನಲ್ಲಿ ಬಿದ್ದುಹೋದ ಪರಿಣಾಮ ಅದು ಪುನಃ ವಿಧಾನಸಭೆ ಮುಂದೆ ಬರಲಿದ್ದು, ಅಲ್ಲಿ ಒಪ್ಪಿಗೆ ಪಡೆದುಕೊಂಡರೂ ಸಾಕಾಗುತ್ತದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಬಂದರೆ, ಮೊದಲ ಸುಗ್ರೀವಾಜ್ಞೆಯಲ್ಲಿ 5 ಜನರಿರುವ ಕುಟುಂಬ 108 ಎಕರೆ ಭೂಮಿ ಖರೀದಿಸಲು ಅವಕಾಶ ನೀಡಲಾಗಿತ್ತು.

ಈಗ ವಿಧಾನಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದಂತೆ 5 ಜನರ ಕುಟುಂಬಕ್ಕೆ 54 ಎಕರೆ ಭೂಮಿ ಸೀಮಿತಗೊಳಿಸಿ ಸುಗ್ರೀವಾಜ್ಞೆ ಪ್ರಕಟಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಮೂರು ಕ್ಲಸ್ಟರ್ ವಿಶ್ವವಿದ್ಯಾಲಯ ವಿಚಾರವು ವಿಧಾನಸಭೆಯಲ್ಲೇ ಬಾಕಿ ಇರುವುದರಿಂದ ಅದಕ್ಕೂ ಮತ್ತೊಮ್ಮೆ ಸುಗ್ರೀವಾಜ್ಞೆ ತರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net