ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್​ ಗೊಗೊಯ್​ ಇನ್ನಿಲ್ಲ

tarun
Published on

ದಿಸ್ಪುರ: ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್​ ಗೊಗೊಯ್​ (86) ಅವರು ಸೋಮವಾರ ನಿಧನರಾಗಿದ್ದಾರೆ. ಕರೊನಾ ಸೋಂಕಿಗೆ ತುತ್ತಾಗಿದ್ದ ಅವರಿಗೆ ಕರೊನಾದಿಂದ ಗುಣಮುಖರಾದ ನಂತರ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ತರುಣ್​ ಅವರು ಬಹು ಅಂಗಾಂಗ ವೈಫಲ್ಯ ಕಾರಣದಿಂದಾಗಿ ಮೃತರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸೋಮವಾರ ಸಂಜೆ 5.35ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್​ನ ಜನಪ್ರಿಯ ನಾಯಕರಾಗಿದ್ದ ಅವರು ಮೂರು ಬಾರಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಅಧಿಕಾರ ನಿರ್ವಹಿಸಿದ್ದರು. ಆರು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಅತಿ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದವರಾಗಿ ಹೆಸರಾಗಿದ್ದರು.

ಆಗಸ್ಟ್​ 25ರಂದು ತರುಣ್​ ಗೊಗೊಯ್​ ಅವರಿಗೆ ಕರೊನಾ ಸೋಂಕು ದೃಢವಾಗಿತ್ತು. ಎರಡು ತಿಂಗಳ ಸತತ ಚಿಕಿತ್ಸೆಯ ನಂತರ ಅಕ್ಟೋಬರ್​ 25ರಂದು ಕರೊನಾ ನೆಗಟಿವ್​ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಲಾಗಿತ್ತು. ಅದಾದ ನಂತರ ಅನೇಕ ಸಮಸ್ಯೆಗಳು ಕಾಣಿಸಿಕೊಂಡಿದ್ದು, ನವೆಂಬರ್​ 2ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿಯಿಂದ ಅವರ ಆರೋಗ್ಯ ಹದಗೆಟ್ಟಿದ್ದಾಗಿ ತಿಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net