

ಕೆ.ಎಂ.ದೊಡ್ಡಿ: ಇಲ್ಲಿನ ಚಾಂಶುಗರ್ಸ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯ ಆರಂಭಿಸಿದ್ದು 10 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್. ಮಣಿ ಹೇಳಿದರು.
ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಖಾನೆಯು ಪ್ರತಿದಿನ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಈ ಸಾಲಿನಲ್ಲಿ 9.50 ಲಕ್ಷದಿಂದ 10 ಲಕ್ಷ ಮೆಟ್ರಿಕ್ ಟನ್ ಅರೆಯುವ ಗುರಿ ಹೊಂದಿರುತ್ತದೆ. 2025-26ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಸಕಾಲದಲ್ಲಿ ಕಬ್ಬು ಕಟಾವು ಮಾಡಲು ರೈತರಿಗೆ ಅನುವಾಗುವಂತೆ ಬಳ್ಳಾರಿ, ತಮಿಳುನಾಡು ಮತ್ತು ಮಹಾರಾಷ್ಟ್ರ ಭಾಗಗಳಿಂದ ಕಾರ್ಮಿಕರನ್ನು ವ್ಯವಸ್ಥೆ ಮಾಡಲಾಗಿದೆ. ಸೂಕ್ತ ದರದಲ್ಲಿ ಕಬ್ಬು ಕಟಾವು ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ಸರಬರಾಜು ಆಗುವ ಕಬ್ಬಿಗೆ ಸಕಾಲದಲ್ಲಿ ಹಣ ಬಟವಾಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕಬ್ಬು ನಾಟಿ ಮಾಡಲು ರೈತರಿಗೆ ಸಹಾಯವಾಗಲೆಂದು ಕಾರ್ಖಾನೆ ವತಿಯಿಂದ ಬಡ್ಡಿ ರಹಿತ ಸಾಲದ ರೂಪದಲ್ಲಿ ಎಕರೆಗೆ 2.5 ನಿಂದ 3 ಟನ್ ಬಿತ್ತನೆ ಕಬ್ಬು ನೀಡಲು ವ್ಯವಸ್ಥೆ ಮಾಡಲಾಗಿದೆ. ಉತ್ಕೃಷ್ಟ ಗುಣಮಟ್ಟದ ಒಂದು ಕಣ್ಣಿನ ಕಬ್ಬಿನ ಸಸಿಗಳನ್ನು ಸಹ ಬಡ್ಡಿರಹಿತ ಸಾಲದ ರೂಪದಲ್ಲಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಬ್ಬಿನ ಇಳುವರಿ ಹೆಚ್ಚಿಸುವ ದೃಷ್ಟಿಯಿಂದ ಕಾರ್ಖಾನೆ ವತಿಯಿಂದ ಉತ್ತಮ ಗುಣಮಟ್ಟದ ಬಯೋಕಾಂಪೋಸ್ಟ್ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಒಂದು ಕಣ್ಣಿನ ಸಸಿ ಬೆಳೆಸಲು ಅಗತ್ಯವಾದ ಪಾಲಿಹೌಸ್ ನಿರ್ಮಿಸಲು ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಾರ್ಖಾನೆ ವತಿಯಿಂದ ನೀಡಲಾಗುತ್ತಿದೆ ಎಂದರು.
ಕಾರ್ಖಾನೆಗೆ ಮೊದಲು ಕಬ್ಬು ತುಂಬಿಕೊಂಡು ಬಂದಂತಹ ಎತ್ತಿನಗಾಡಿ, ಟ್ರಾೃಕ್ಟರ್, ಲಾರಿಗೆ ಬಹುಮಾನ ವಿತರಿಸಲಾಯಿತು. ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಸೆಂಥಿಲ್, ಪ್ರಧಾನ ವ್ಯಸ್ಥಾಪಕ ಎಂ.ರವಿ, ಕಬ್ಬು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹದೇವು ಪ್ರಭು, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಣಿಮಾರನ್, ಆಡಳಿತ ವಿಭಾಗದ ಅಧಿಕಾರಿಗಳಾದ ನಿತೇಶ್, ನಿಂಗಯ್ಯ, ರೈತ ಮುಖಂಡರು ಉಪಸ್ಥಿತರಿದ್ದರು.