ಕನ್ನಡ ಪರಂಪರೆಯನ್ನು ಶ್ರೀಮಂತಗೊಳಿಸಿದ ಧೀಮಂತ; ತರಾಸು ನೂರರ ನೆನಪು

edit 2
Published on

ಚಿತ್ರದುರ್ಗವೆಂದರೆ ನೆನಪಾಗುವುದು ಕೋಟೆಕೊತ್ತಲು, ಮುರಘಾಮಠ, ಸಂತೆಹೊಂಡಗಳಷ್ಟೆ ಅಲ್ಲದೆ ಇಡೀ ದುರ್ಗದ ಇತಿಹಾಸಕ್ಕೆ ಜೀವವನ್ನು ತುಂಬಿ ಜಗತ್ತಿನ ಮುಂದೆ ಮೆರೆದಾಡುವಂತೆ ಮಾಡಿದ ಕನ್ನಡ ಭುವನೇಶ್ವರಿಯ ಹೆಮ್ಮೆಯಪುತ್ರ, ಕನ್ನಡದ ಉತ್ಕೃಷ್ಟ ಕಾದಂಬರಿಕಾರ ತಳುಕು ರಾಮಸ್ವಾಮಿ ಸುಬ್ಬರಾಯ (ತರಾಸು). ವಿಶ್ವದ ಶ್ರೇಷ್ಠ ಚಾರಿತ್ರಿಕ ಆಂಗ್ಲ ಕಾದಂಬರಿಕಾರ ಸರ್ ವಾಲ್ಟರ್​ಸ್ಕಾಟರಿಗೆ ಇವರೇನು ಕಡಿಮೆಯೆಂಬ ಪ್ರಶ್ನೆಯನ್ನು ಓದುಗರಲ್ಲಿ ಮೂಡಿಸವಷ್ಟು ಕಲೆಗಾರಿಕೆಯನ್ನು ಹೊಂದಿದ, ಪದಕುಂಚ ಪಾರಮ್ಯವನ್ನು ಸಿದ್ಧಿಸಿಕೊಂಡ ಕಲಾಕಾರ. ದುರ್ಗದ ಖ್ಯಾತಿಯ ಮೂಲ ಹೊಣೆಗಾರ, ದುಗೋದಯವ ದಾಖಲಿಸಿ ‘ಕಸ್ತೂರಿ ಕಂಕಣ’ವ ಕಟ್ಟಿಕೊಂಡು ಕಾದಂಬರಿಗಳ ರಾಜ್ಯದಾಹಕ್ಕೆ ಸ್ಪಂದಿಸಿ, ‘ರಕ್ತರಾತ್ರಿ’ಯ ನೆನಪಿಸಿ, ಹೊಸಹಗಲನ್ನೆ ನಿರ್ವಿುಸಿ, ‘ಕಂಬನಿಯ ಕುಯಿಲು’ ನಮ್ಮಲ್ಲಿ ಮಿಡಿಸಿ ‘ಹಂಸಗೀತೆ’ಯನ್ನು ಹಾಡಿ ‘ದುರ್ಗಾಸ್ತಮಾನ’ವನ್ನೇ ನಮ್ಮೆದುರು ನಡೆದಂತೆ ಸೃಷ್ಟಿಸಿ ಓದುಗರನ್ನು ಮಂತ್ರಮುಗ್ಧ ‘ಚಂದನದ ಗೊಂಬೆ’ಗಳನ್ನಾಗಿ ಮಾಡಿ ಕನ್ನಡ ಭಾಷೆಲಾವಣ್ಯದ ವೈಭವವನ್ನು ಸಾಕ್ಷಾತ್ಕಾರ ಮಾಡಿಸಿದ ಮಹಾಚೇತನ ತರಾಸು.

ತರಾಸು ಎಂಬ ಮೂರು ಅಕ್ಷರಗಳೇ ಸಾಕು ದುರ್ಗವನ್ನು ಪುಳಕಿತಗೊಳಿಸಲು, ದುರ್ಗದ ಜನರನ್ನು ರೋಮಾಂಚನಗೊಳಿಸಿ ಅಂತಹ ಮಹಾನ್ ಸ್ಥಳದಲ್ಲಿನ ತಮ್ಮ ಹುಟ್ಟುಗಳ ಬಗ್ಗೆ ಹೆಮ್ಮೆಯನ್ನು ಮೂಡಿಸಲು, ದುರ್ಗದ ಹೆಸರನ್ನು ದೇಶದಾದ್ಯಂತ ಪ್ರಸಿದ್ಧಿಗೊಳ್ಳುವಂತೆ ಮಾಡಿದ ಪ್ರಮುಖರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೆಂದರೆ ತರಾಸು. ಕೇವಲ ಒಂದು ಊರಿನ ಸ್ಥಳಚರಿತ್ರೆಯನ್ನು ಆಧರಿಸಿ ಅತ್ಯದ್ಭುತವಾದ, ಹೆಚ್ಚಿನ ಸಂಖೆಯ ಕಾದಂಬರಿಗಳನ್ನು ರಚಿಸಿ ಆ ಪ್ರದೇಶವನ್ನು ದೇಶದ ಭೂಪಟದಲ್ಲಿ ರಂಗು ರಂಗಾಗಿಸಿದ ಹೆಗ್ಗಳಿಕೆ ತರಾಸು ಅವರದ್ದು.

ಬಹುಜನರಿಗೆ ಥಟ್ಟನೆ ನೆನಪಾಗುವುದು ಚಲನಚಿತ್ರಗಳಾದ ಅವರ ಕಾದಂಬರಿಗಳು. ಅವೆಂದರೆ, ‘ಚಂದ್ರವಳ್ಳಿಯ ತೋಟ’, ‘ಚಕ್ರತೀರ್ಥ’, ‘ಮಸಣದ ಹೂವು’, ‘ಬೆಂಕಿಯಬಲೆ’, ‘ಆಕಸ್ಮಿಕ’, ‘ಹಂಸಗೀತೆ’, ‘ಗಾಳಿಮಾತು’, ‘ಚಂದನದ ಗೊಂಬೆ’, ‘ಬಿಡುಗಡೆಯ ಬೇಡಿ’ ಮತ್ತು ಮುಖ್ಯವಾಗಿ ‘ನಾಗರಹಾವು’. ‘ನಾಗರಹಾವು’ ಚಲನಚಿತ್ರ ಬಂದಾಗ ವಿಷ್ಣುವರ್ಧನ್ ಒಬ್ಬ ಹೊಸ ನಾಯಕನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ವಿಷ್ಣು ನಟಿಸಿದ ‘ರಾಮಾಚಾರಿ’ಯನ್ನು ನಮ್ಮ ಕನ್ನಡಿಗರು ಇಂದಿಗೂ ಮರೆತಿಲ್ಲ. ಆ ಚಿತ್ರದ ಚಾಮಯ್ಯ ಮೇಷ್ಟ್ರು, ಅಲುಮೇಲು, ಮಾರ್ಗರೇಟ್, ಜಲೀಲ ಮುಂತಾದವರು ಕನ್ನಡಿಗರ ಹೃನ್ಮನಗಳಲ್ಲಿ ಸದಾ ಜೀವಂತವಾಗಿದ್ದಾರೆ. ‘ದುರ್ಗಾಸ್ತಮಾನ’ದಲ್ಲಾಗಲಿ ಅಥವಾ ಇನ್ನಾವುದೇ ಚಾರಿತ್ರಿಕ ಕಾದಂಬರಿಯಲ್ಲಾಗಲಿ ತರಾಸು ಕಲ್ಲೊಂದನ್ನು ದೇವರಾಗಿಸುವ ಕೆಲಸ ಮಾಡಿದ್ದಾರೆ. ಅಂತೆಯೇ ವಿದ್ವಾಂಸರೊಬ್ಬರ ಮಾತನ್ನು ನಾವಿಲ್ಲಿ ಸ್ಮರಿಸಬಹುದು. ‘ತರಾಸು ಕಥೆಯನ್ನು ಇತಿಹಾಸವಾಗಿಸಬಲ್ಲರು ಮತ್ತು ಇತಿಹಾಸವನ್ನು ಕಥೆ ಆಗಿಸಬಲ್ಲರು’. ಈ ಮಾತು ತರಾಸು ಮಾಂತ್ರಿಕಸ್ಪರ್ಶಕ್ಕೊಂದು ನಿದರ್ಶನ.

ಬಹುಶಃ ಪತ್ತೆದಾರಿ ಕಾದಂಬರಿ ಹೊರತು ಪಡಿಸಿ ತರಾಸು ಎಲ್ಲ ರೀತಿಯ ಕಾದಂಬರಿಗಳನ್ನು ರಚಿಸಿ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಆ ದಿನಗಳು ಸ್ವಾತಂತ್ರ್ಯ ಚಳವಳಿ, ಕನ್ನಡ ಚಳವಳಿ, ಸಾಹಿತ್ಯದಲ್ಲಿ ನವ್ಯ ಚಳವಳಿ, ಹೀಗೆಯೇ ತರಾಸು ಜೀವಿತಾವಧಿ ಚಳವಳಿಗಳ ಕಾಲ. ಒಬ್ಬ ಯಶಸ್ವಿ ಕಾದಂಬರಿಕಾರರಾಗಿ ತಮ್ಮ ಕೃತಿಗಳಲ್ಲಿ ಸಮಾಜದ ಹರಿವನ್ನು ಬಿಂಬಿಸುವಲ್ಲಿ ತರಾಸು ಸಿದ್ಧಹಸ್ತರು. ಅವರ ಸಾಮಾಜಿಕ ಕಾದಂಬರಿಗಳು ವ್ಯಕ್ತಿ ಹಾಗೂ ಸಮಷ್ಠಿಯ ಹಲವಾರು ಗೊಂದಲಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ಚಾರಿತ್ರಿಕ ಕಾದಂಬರಿಗಳ ವಿಷಯಕ್ಕೆ ಬಂದರೆ ಅಲ್ಲಿ ಅವರ ನಿರೂಪಣಾಕಲೆ ವಿಶಿಷ್ಟ. ದುರ್ಗವನ್ನಾಳಿದ ಪಾಳೇಗಾರರ ಬಗ್ಗೆ ಲಭ್ಯವಿದ್ದ ಅಲ್ಪ ಮಾಹಿತಿಯನ್ನು ತಮ್ಮ ಕಲ್ಪನಾದರ್ಶಗಳ ಮಂತ್ರಜಲ ಪ್ರೋಕ್ಷಣೆಯಿಂದ ಅತ್ಯದ್ಭುತ ಎನಿಸುವಷ್ಟರ ಮಟ್ಟಿಗೆ ಜೀವಂತಗೊಳಿಸಿ ಕನ್ನಡದ ಚಾರಿತ್ರಿಕ ಕಾದಂಬರಿ ಪ್ರಕಾರಕ್ಕೆ ಹೊಸ ಸಾಧ್ಯತೆಯನ್ನೇ ದರ್ಶನ ಮಾಡಿಸಿದರು. ಪೌರಾಣಿಕ ಕಾದಂಬರಿಗಳಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ದಿಗ್ಗಜರೇ ಆಗಿದ್ದರು. ಅದಕ್ಕೆ ಅವರ ಕಾದಂಬರಿಗಳಾದ ‘ನಾಲ್ಕು್ಡನಾಲ್ಕು = ಒಂದು’, ‘ಬೆಳಕು ತಂದ ಬಾಲಕ’, ‘ಚಕ್ರೇಶ್ವರಿ’ಗಳೇ ಸಾಕ್ಷಿ. ಕನ್ನಡದಲ್ಲಿ ಈ ಕಾದಂಬರಿ ಪ್ರಕಾರಕ್ಕೆ ಬುನಾದಿಯನ್ನು ಹಾಕಿದವರಲ್ಲಿ ದೇವುಡುರ ಸಮಾನ ಕಲೆಗಾರರೆಂದರೆ ತರಾಸು.

ತರಾಸು ಪಾತ್ರಪ್ರಪಂಚವಂತೂ ಅನನ್ಯ. ಪಾತ್ರ ಸೃಷ್ಟಿಯಲ್ಲಿ ಕಾದಂಬರಿಕಾರನೊಬ್ಬನಿಗೆ ಬೇಕಾಗುವ ಪರಕಾಯ ಪ್ರವೇಶದ ಕಲೆ ಅವರಿಗೆ ಲೀಲಾಜಾಲ. ತರಾಸು ಅವರ ಸೃಷ್ಟಿಗಳು ಕಾದಂಬರಿಯ ಪುಟಗಳಲ್ಲಷ್ಟೆ ಉಳಿದು ಹೋಗದೆ ಓದುಗರೊಡನೆ ಬೆರೆತು ಜೀವಿಸಲಾರಂಭಿಸುತ್ತವೆ. ನಾಗರಹಾವಿನ ರಾಮಾಚಾರಿ, ಮಾರ್ಗರೇಟ್, ಅಲುಮೇಲು, ಚಾಮಯ್ಯ ಮೇಷ್ಟ್ರು, ಇಷ್ಟು ಕಾಲಾನಂತರವೂ ಇಂದಿಗೂ ಜೀವಂತರೇ. ‘ಚಂದನದ ಗೊಂಬೆ’ಯ ವಿಧವೆ ರತ್ನಮ್ಮ ಮತ್ತು ಖಳನಾಯಕ ಚಿನ್ನೊಬಯ್ಯ ಹಾಗೂ ರಾಘಣ್ಣ ಇಂದಿಗೂ ಓದುಗರ ಮನದಲ್ಲಿ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ. ‘ಹಂಸಗೀತೆೆ’ಯ ವೆಂಕಟಸುಬ್ಬಯ್ಯ, ಚಂದ್ರಸಾನಿ, ಅನಂತಯ್ಯ ಓದುಗರ ಚಿರ ಸಂಗಾತಿಗಳಾಗುತ್ತಾರೆ.

‘ಚಂದನದಗೊಂಬೆೆ’ಯ ಖಳನಾಯಕ ಚಿನ್ನೋಬಯ್ಯ ತನ್ನ ಹೃದಯ ಪರಿವರ್ತನೆಯಿಂದ ನಮ್ಮಲ್ಲಿ ಉಳಿದುಕೊಂಡರೆ, ‘ಹಂಸಗೀತೆ’ಯ ಟಿಪ್ಪುಸುಲ್ತಾನ್ ಕೂಡ ಅಷ್ಟೆ, ತನ್ನ ವ್ಯಕ್ತಿತ್ವದ ಹಿರಿತನದಿಂದ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಮಾರ್ಪಾಡಾಗಿ ವೆಂಕಟಸುಬ್ಬಯ್ಯರ ಸಂಗೀತದ ಆರಾಧಕನಾಗಿ ದಾನದತ್ತಿಗಳನ್ನು ನೀಡಿ ಓದುಗರ ಹೃದಯ ಗೆದ್ದು ಬಿಡುತ್ತಾನೆ.

ಕಥನಕಲೆ, ಕಣ್ಣಿಗೆ ಕಟ್ಟುವಂಥ ವರ್ಣನೆಗಳು, ಕಾದಂಬರಿಯಾಚೆಗೆ ಬಂದು ಎಂದಿಗೂ ನಮ್ಮೊಡನೆ ನಿಲ್ಲುವ ಪಾತ್ರಗಳು, ಹೃದಯವನ್ನು ಹಿಂಡುವಂತಹ ಸನ್ನಿವೇಶಗಳು, ಮನಕಲಕುವಂತಹ ಮತ್ತು

ಅಂತಃಕರಣದಿಂದ ಮೂಡಿಬರುವ ಸಂಭಾಷಣೆಗಳು, ಭಾವೋದ್ವೇಗಗಳು, ಅತ್ಯುನ್ನತ ಮೌಲ್ಯಗಳು, ಆಂತರ್ಯವನ್ನು ಕಲಕುವ ಆದರ್ಶಗಳು ಇವೆಲ್ಲ ತರಾಸು ಗಂಗೆಯ ಹೊಳಲುಗಳು. ಹಲವು ಭಾಷೆಯ ಕೃತಿಗಳನ್ನು ಓದಿದ ಅನುಭವ ಇರುವವರ ಅರಿವಿಗೆ ಬರುವ ಒಂದು ಪ್ರಮುಖ ಅಂಶವೆಂದರೆ ಅವರ ಭಾಷಾವೈವಿಧ್ಯ ಮತ್ತು ಸೌಂದರ್ಯ, ಅದ್ವಿತೀಯವಾದ ತಮ್ಮ ಭಾಷಾವೈಯಾರದಿಂದ ಕನ್ನಡ ಭಾಷೆಯನ್ನು ಹೃದಯಂಗಮವಾಗಿಸಿದ್ದಾರೆ.

ಆದಾಗ್ಯೂ ತರಾಸು ಎಂದಿಗೂ ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ. ಪದವಿ, ಸ್ಥಾನ, ಸನ್ಮಾನಗಳಿಗಾಗಿ ಲಾಬಿ ಮಾಡಿದವರಲ್ಲ್ಲ ನಿಸ್ವಾರ್ಥ, ಆದರ್ಶಮಯ ಜೀವನಶೈಲಿಯನ್ನು ಸಾಹಿತ್ಯದಲ್ಲಷ್ಟೆ ಅಲ್ಲದೆ ಆಚರಣೆಯಲ್ಲಿ ಇಟ್ಟುಕೊಂಡಿದ್ದವರು. 50ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು. ಕನ್ನಡ ಕಾದಂಬರಿ ಸಾರ್ವಭೌಮರೆನ್ನಿಸಿಕೊಂಡಂತಹ ಅನಕೃರವರ ಪರಮಾಪ್ತರಾಗಿದ್ದು, ತಮ್ಮದೇ ಛಾಪನ್ನು ಮೂಡಿಸಿದವರು. ದೇವುಡುರಂಥ ದಿಗ್ಗಜರಿಂದ ಅಭಿಮಾನಪೂರ್ವಕವಾಗಿ ಛೇಡಿಸಿಕೊಳ್ಳುತ್ತ (ನಾಲ್ಕು್ಡನಾಲ್ಕು=ಒಂದು ರಂಥಹ) ಪೌರಾಣಿಕ ಕಾದಂಬರಿಗಳನ್ನು ನೀಡಿ ಸೈಯನ್ನಿಸಿಕೊಂಡರು. ಅವರ ‘ಹಂಸಗೀತೆ’ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ‘ದುರ್ಗಾಸ್ತಮಾನ’ ಅವರ ಕಡೆಯ ಕಾದಂಬರಿ, ಅಷ್ಟೇ ಮಹತ್ವಾಕಾಂಕ್ಷೆಯ ಕಾದಂಬರಿ. ಅದು ಮರಣೋತ್ತರವಾಗಿ ಆ ಚೇತನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪುರಸ್ಕರಿಸಿತು. ಅವರ ನೆಚ್ಚಿನ ದುರ್ಗದಲ್ಲಂತೂ ಸುಸಜ್ಜಿತ ತರಾಸು ರಂಗಮಂದಿರ ನಿರ್ವಣಗೊಂಡು ಉತ್ತಮ ಕಲಾಭವನವಾಗಿ ವಿಜೃಂಭಿಸುತ್ತಿದೆ. ತಳುಕಿನಲ್ಲಿ ಅವರ ಸ್ಮಾರಕವಾಗಿ ಬಯಲು ರಂಗಮಂದಿರ ಮತ್ತು ಸಸ್ಯವನ ತೆರೆಯಲಾಗಿದೆ. ಈ ಮಹೋನ್ನತ ಚೇತನವು ಜನ್ಮವೆತ್ತಿದ್ದು ವಕೀಲ (ಪ್ಲೀಡರ್) ವೃತ್ತಿಯ ತಂದೆ ರಾಮಸ್ವಾಮಿ ಹಾಗೂ ತಾಯಿ ಜಾನಕಮ್ಮ ವಾಸವಾಗಿದ್ದ ಹರಿಹರ ಹತ್ತಿರದ ಮಲೆಬೆನ್ನೊರಿನಲ್ಲಿ. ಅವರ ಪೂರ್ವಜರು ಆಂಧ್ರದಿಂದ ಬಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ನೆಲೆಸಿದ್ದರು. ಹದಿನಾರರ ಹರೆಯಕ್ಕೆ ಕಾಲಿಟ್ಟಾಗಲೇ ತರಾಸು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ಚಿತ್ರದುರ್ಗ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ತಿರುಗಾಡುತ್ತ, ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದರು ಮತ್ತು ಭಾಷಣ ಮಾಡುವುದರಲ್ಲಿಯೂ ತೊಡಗಿಸಿಕೊಡಿದ್ದರು. ಕೆಲವೇ ದಿನಗಳಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದರು. ನಂತರ ತಂದೆ ಸೂಚನೆ ಮೇರೆಗೆ ಬೆಂಗಳೂರು, ತುಮಕೂರು ಮತ್ತು ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ‘ಕ್ವಿಟ್ ಇಂಡಿಯಾ ಚಳವಳಿ’ಯಲ್ಲಿ ಪೂರ್ಣಪ್ರಮಾಣದಲ್ಲಿ ಧುಮುಕಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತರು.

ಅಂದಿನ ಕನ್ನಡದ ಖ್ಯಾತ ಪತ್ರಿಕೆಗಳಾಗಿದ್ದ ‘ವಿಶ್ವಕರ್ನಾಟಕ’, ‘ಪ್ರಜಾಮತ’, ‘ವಿಚಾರವಾಣಿ’, ಮುಂತಾದ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿ ವೃತ್ತಿಜೀವನ ನಡೆಸಿದರು. ಅದೇ ಕಾಲಘಟ್ಟದಲ್ಲಿ ಅಂಬುಜಾರನ್ನು ಮದುವೆಯಾಗಿ ಗೃಹಸ್ಥಾಶ್ರಮ ಜೀವನ ಆರಂಭಿಸಿದರು. ಆರ್ಥಿಕ ಮುಗ್ಗಟ್ಟಿನಲ್ಲಿಯೇ ಬದುಕಬಂಡಿ ಸಾಗುತ್ತಿತ್ತು. ಸರ್ಕಾರದ ವತಿಯಿಂದ ರಷ್ಯಾ ದೇಶಕ್ಕೆ ಹೋಗುವ ಸುಯೋಗ ಅವರನ್ನರಸಿ ಬಂದು ಅವರ ಜೀವನ ಕೊಂಚಕೊಂಚವಾಗಿ ಬದಲಾಯಿತು. ಅವರ ಹಲವಾರು ಕಾದಂಬರಿಗಳು ಚಲನಚಿತ್ರಗಳಾದವು. ತರಾಸು ರಚಿಸಿದ ಒಂದು ಕಥಾವಸ್ತುವೇ ಹಿಂದಿಯ ‘ಬಸಂತ್​ಬಹಾರ್’ ಚಿತ್ರವಾಯಿತು. ಬಾಳದೋಣಿ ನಿರಾತಂಕವಾಗಿ ಚಲಿಸಲಾರಂಭಿಸಿತು. ಮೈಸೂರಿನಲ್ಲಿ ಮನೆ ಕಟ್ಟಿ, ಮೂರು ಮಕ್ಕಳೊಂದಿಗೆ ಸುಖಜೀವನ ನಡೆಸಿದರು. ಆರೋಗ್ಯ ಹದಗೆಟ್ಟರೂ ಶೃಂಗೇರಿ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗಿ ‘ನಾಲ್ಕು್ಡನಾಲ್ಕು=ಒಂದು’ ಕಾದಂಬರಿಯನ್ನು ಪವಾಡಸದೃಶವಾಗಿ ರಚಿಸಿದರೆಂದು ಅವರೇ ಹೇಳಿಕೊಂಡಿದ್ದಾರೆ.

ಅನಾರೋಗ್ಯದ ಕಾರಣ ದೇಹ ಸಹಕರಿಸಲು ಹಿಮ್ಮೆಟ್ಟುತ್ತಿದ್ದರೂ ಹಲವಾರು ಕೃತಿಗಳನ್ನು ರಚಿಸುವ ಯೋಜನೆ ನಿಲ್ಲಿಸಿರಲಿಲ್ಲ. ಅವರ ಅಂತಹುದೇ ಅಪೂರ್ಣ ಯೋಜನೆಯಲ್ಲಿ ಒಂದು, ಆತ್ಮಕಥನ ಕೃತಿ. ತರಾಸು ಮರಣದಿಂದಾಗಿ ಅಪೂರ್ಣವಾಗಿ ಉಳಿದ ಆ ಕಾರ್ಯವನ್ನು ಅವರ ಪತ್ನಿ ಅಂಬುಜಾ ಪೂರೈಸಿದರಂತೆ. ಒಂದುವೇಳೆ ತರಾಸು ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಿದ್ದರೆ ಅವರು ಪೌರಾಣಿಕ ಕೃತಿಗಳನ್ನೂ ರಚಿಸುತ್ತಿದ್ದರೇನೋ, ಹಲವು ಬ್ರರ್ಹ¾, ರಾಜರ್ಷಿ, ಮಹರ್ಷಿಗಳ ಜೀವನಗಳನ್ನಾಧರಿಸಿದ ಕಾದಂಬರಿಗಳು ರಚಿತವಾಗಿ ಆ ಮಹಾಪುರುಷರಿಗೆ ಪುನರುಜ್ಜೀವನ ದೊರೆಯುತ್ತಿತ್ತೇನೋ! ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಕೂಡ ಇವರ ಲೇಖನಿಯ ಮಂತ್ರಸ್ಪರ್ಶಕ್ಕೆ ಸಿಕ್ಕಿ ನಮ್ಮನ್ನು ಮತ್ತಷ್ಟು ಪುನೀತರನ್ನಾಗಿಸುತ್ತಿದ್ದವೇನೋ! ತರಾಸು ಚೇತನವು ಇನ್ನೊಮ್ಮೆ ಜನ್ಮವೆತ್ತಿ ಬಂದು ಉಳಿಸಿಹೋದ ಕಾರ್ಯವನ್ನು ಪೂರ್ಣಗೊಳಿಸಬಹುದೇನೋ! ಈ ಜನ್ಮಶತಾಬ್ಧಿಯ ಸಂದರ್ಭದಲ್ಲಿ ನಾವದನ್ನು ಆಶಿಸುವುದು ಔಚಿತ್ಯವಲ್ಲವೆ!.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net