ಬೆಂಗಳೂರು: ‘ಬಿಗ್‌ಬಾಸ್ ಕನ್ನಡ ಸೀಸನ್ 10’ರ ಬಳಿಕ ನಟಿ ತನಿಷಾ ಕುಪ್ಪಂಡ ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದಾರೆ. ಕಳೆದ ವರ್ಷ ನಟಿಯ ‘ಕೋಣ’, ‘ಪೆನ್‌ಡ್ರೈವ್’ ಸಿನಿಮಾಗಳು ರಿಲೀಸ್ ಆಗಿದ್ದರೆ, ಈ ವರ್ಷ ‘ಶೇರ್’, ‘ಊರಬ್ಬ’ ತೆರೆಕಂಡಿವೆ. ಈ ಮಧ್ಯೆಯೇ ಅವರು ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಅದೇ ‘ಕೆಎ-18’. ಮೋಹನ್ ಚಿಕ್ಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಹೊಸಬರಾದ ಎ.ಟಿ.ಎಂ. ಮಂಜು ನಿರ್ಮಿಸುತ್ತಿದ್ದು ಜತೆಗೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ. ತನಿಷಾ ಕುಪ್ಪಂಡ, ‘‘ಕೆಎ-18’ ಎಂದು ಟೈಟಲ್ ಎಂದಾಕ್ಷಣ ಇದು ಚಿಕ್ಕಮಗಳೂರಿನಲ್ಲಿ ನಡೆಯುವ ಕಥೆ ಎಂದು ಗೊತ್ತಾಗಿಬಿಡುತ್ತದೆ. ಒಂದು ರಾತ್ರಿಯಲ್ಲಿ ನಡೆಯುವ ಘಟನೆಯಾಗಿದ್ದು, ಅದರಲ್ಲಿ ಯಾರು ಯಾರಿಗೆ ತೊಂದರೆ ಕೊಡುತ್ತಾರೆ? ಯಾರು ಒಳ್ಳೆಯದು ಮಾಡುತ್ತಾರೆ ಎಂಬುದೇ ಸ್ಟೋರಿ. ಕಡಿಮೆ ಜನ ಕಲಾವಿದರನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದ್ದು, ಅದು ಸವಾಲೇ ಸರಿ. ಇಲ್ಲಿ ನಾನು ಅಂಕಿತಾ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ’ ಎಂದು ಹೇಳಿಕೊಂಡರು. ‘ನಟ ಮಂಜು ಹೇಳಿದ ಒಂದು ಎಳೆಯನ್ನಿಟ್ಟುಕೊಂಡು ಕಥೆಯನ್ನು ವಿಸ್ತರಿಸಲಾಗಿದೆ. ಕೇವಲ ಎರಡು ಪಾತ್ರಗಳ ಸುತ್ತ ಇಡೀ ಕಥೆ ಸುತ್ತುತ್ತದೆ. ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಡೆಯುವ ಘಟನೆಯಲ್ಲಿ ನಾಲ್ಕೈದು ಎಲಿಮೆಂಟ್ಸ್ ಬರುತ್ತವೆ. ಇಡೀ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿಯೇ ನಡೆಯುತ್ತದೆ’ ಎಂದು ಮೋಹನ್ ಚಿಕ್ಕಿ ಮಾಹಿತಿ ನೀಡಿದರು.