ಪಾಸ್​ ಮಾಡಲು ಎಚ್​ಒಡಿಗೆ 18 ವರ್ಷದ ಹುಡುಗಿಯರ ಪೂರೈಕೆ: ಬಿರುಗಾಳಿ ಎಬ್ಬಿಸಿದ ಗಾಯಕಿ ಚಿನ್ಮಯಿ ರೀಟ್ವೀಟ್​

Chinmayi Sripaada
Published on

ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಅವರು ಇದೀಗ ಮಾಡಿರುವ ರಿಟ್ವೀಟ್​ ಒಂದು ವೈದ್ಯಕೀಯ ಶಿಕ್ಷಣ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಆರ್ಥೋಪೆಡಿಶಿಯನ್ ಡಾ. ಜಾಸನ್​ ಫಿಲಿಪ್​ ಎಂಬುವರು ಮಾಡಿರುವ ಟ್ವೀಟ್​ ಅನ್ನು ಚಿನ್ಮಯಿ, ರೀಟ್ವೀಟ್​ ಮಾಡಿದ್ದಾರೆ. ಜಾಸನ್​ ಟ್ವೀಟ್​ನಲ್ಲಿ ತಿಳಿಸಿರುವ ವಿಷಯ ತುಂಬಾ ಗಂಭೀರವಾಗಿದ್ದು, ಮೆಡಿಕಲ್​ ಶಿಕ್ಷಣದ ಕರಾಳತೆಯನ್ನು ಬಿಚ್ಚಿಟ್ಟಿದಂತಿದೆ. ಜಾಸನ್​ ಅವರು ವಿದ್ಯಾರ್ಥಿ ಆಗಿದ್ದ ಸಮಯದಲ್ಲಿ ನಡೆದ ಘಟನೆ ಇದಾಗಿದೆ. ಆರ್ಥೋಪೆಡಿಕ್​ ವಿಭಾಗದ ಮುಖ್ಯಸ್ಥ ಅಥವಾ ಎಚ್​ಒಡಿಯ ದುರ್ವರ್ತನೆಗೆ ಸಂಬಂಧಿಸಿದ ಟ್ವೀಟ್​ ಇದಾಗಿದೆ.

ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ

ಆರ್ಥೋಪೆಡಿಶಿಯನ್ ಟ್ವೀಟ್​ ಪ್ರಕಾರ, ಅವರು ಅಂತಿಮ ವರ್ಷದ ಆರ್ಥೋಪೆಡಿಕ್​ ಓದುತ್ತಿದ್ದ ಸಂದರ್ಭದಲ್ಲಿ ಎಚ್​ಒಡಿ, ಪ್ರತಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹುಡುಗಿಯರನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದರಂತೆ. ಇಬ್ಬರು ಸುಂದರ ಮತ್ತು ಎತ್ತರವಾದ 18 ವರ್ಷದ ಹುಡುಗಿಯರನ್ನು ಒಂದು ರಾತ್ರಿಗೆ ಪೂರೈಸುವಂತೆ ಬೇಡಿಕೆ ಇಡುತ್ತಿದ್ದರು. ಪರೀಕ್ಷೆಯಲ್ಲಿ ಪಾಸ್​ ಮಾಡಬೇಕಾದರೆ ಹುಡುಗಿಯರನ್ನು ಪೂರೈಸಿ ಎಂದು ಕೇಳುತ್ತಿದ್ದರು ಎಂದಿದ್ದಾರೆ. ಅಲ್ಲದೆ, ನನ್ನ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದಿರುವ ಆರ್ಥೋಪೆಡಿಶಿಯನ್, ಎಚ್​ಒಡಿ ತುಂಬಾ ಪ್ರಭಾವ ವ್ಯಕ್ತಿಯಾಗಿದ್ದು, ತಮಿಳುನಾಡಿನಾದ್ಯಂತ ತಮ್ಮ ಪ್ರಭಾವ ಹೊಂದಿದ್ದಾರೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ತುಂಬಾ ಪ್ರಭಾವ

ತಮಿಳುನಾಡಿನ ರಾಜಕೀಯದಲ್ಲಿ ಎಚ್​ಒಡಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಒಂದು ವೇಳೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮದ ಮೊರೆ ಹೋದರೆ ಅವರಿಗೆ ತಿರುಮಂತ್ರವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಆರ್ಥೋಪೆಡಿಶಿಯನ್ ತಮ್ಮ ಟ್ವೀಟ್​ನಲ್ಲಿ ಎಚ್ಚರಿಸಿದ್ದಾರೆ.

ಚಿನ್ನದ ಸರ

ಆರ್ಥೋಪೆಡಿಶಿಯನ್ ಜಾಸನ್​ ಟ್ವೀಟ್​ ಬೆನ್ನಲ್ಲೇ ಡಾ. ದೇವಾಶಿಶ್ ಪಾಲ್ಕರ್ ಎಂಬುವರು ಕೂಡ ಒಂದು ಘಟನೆಯನ್ನು ತಿಳಿಸಿದ್ದಾರೆ. ಇತ್ತಿಚೆಗಷ್ಟೇ ಅವರು ಓರ್ವ ಮೆಡಿಕಲ್​ ವಿದ್ಯಾರ್ಥಿಯನ್ನು ಮಾತನಾಡಿಸಿದಾಗ, ಮೊದಲ ಪ್ರಯತ್ನದಲ್ಲೇ ಪಾಸ್​ ಆಗಲು ಎಚ್​ಒಡಿಗೆ ಚಿನ್ನದ ಸರ ನೀಡಿದ್ದೇ ಎಂದು ತಿಳಿಸಿದ್ದನು ಎಂದಿದ್ದಾರೆ.

ಮೇಲಿನ ಈ ಎರಡು ಪೋಸ್ಟ್ ಸಂಪೂರ್ಣವಾಗಿ, ವೈದ್ಯಕೀಯ ಕ್ಷೇತ್ರದಲ್ಲಿನ ದುರ್ನಡತೆ ಮತ್ತು ಅನೈತಿಕ ನಡವಳಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಇದು ಅಧಿಕಾರ ದುರುಪಯೋಗಗಳನ್ನು ಹೈಲೈಟ್ ಮಾಡಿದೆ.

ಪಿಂಪ್‌ಗಳು

ಟ್ವೀಟ್​ ವಿರುದ್ಧ ಹರಿಹಾಯ್ದಿರುವ ಚಿನ್ಮಯಿ, ಕೆಲವು ಪಿಜಿ ವಿದ್ಯಾರ್ಥಿಗಳು ತಾವು ಪಾಸಾಗಲು 18 ವರ್ಷದ ಹುಡುಗಿಯರನ್ನು ಎಚ್‌ಒಡಿಗೆ ಪೂರೈಸುತ್ತಿದ್ದರು ಎಂದು ಹೇಳಲಾಗಿದೆ. ಹಾಗಾದರೆ, ಹುಡುಗಿಯರು ಕಾಳಜಿಯನ್ನು ಯಾರು ವಹಿಸುತ್ತಾರೆ, ಪಿಜಿ ವಿದ್ಯಾರ್ಥಿಗಳು ವೈದ್ಯರಾಗುವ ಮೊದಲು ಪಿಂಪ್‌ಗಳು ಮತ್ತು ಮಾನವ ಕಳ್ಳಸಾಗಣೆದಾರರಾದರು ಎಂದು ಕಿಡಿಕಾರಿದ್ದಾರೆ.

ಖಂಡಿತವಾಗಿಯೂ ಅವನು ತುಂಬಾ ಶಕ್ತಿಶಾಲಿ ಆಗಿರಬಹುದು. ಯಾರೂ ಆತನ ಕ್ರೌರ್ಯವನ್ನು ಬಹಿರಂಗಪಡಿಸುವ ಧೈರ್ಯ ಮಾಡುವುದಿಲ್ಲವೋ ಅವರು ಯಾರೇ ಆಗಿರಲಿ ಅವರು ಪಿಂಪ್‌ಗಳಾಗಿರುತ್ತಾರೆ ಎಂದು ಚಿನ್ಮಯಿ ಹೇಳಿದ್ದಾರೆ. ಇದೀಗ ಈ ಟ್ವೀಟ್​ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net